ಬೆಂಗಳೂರು: ಸಂವಿಧಾನ ದಿನಾಚರಣೆಯ ದಿನದಂದೆ ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದ ಕಾಂಗ್ರೆಸ್ ಪಕ್ಷದ ಸಂವಿಧಾನ ವಿರೋಧಿ ಧೋರಣೆ ಹೊಸದೇನೂ ಅಲ್ಲ. ಅದಕ್ಕೆ ದೊಡ್ಡ ಕರಾಳ ಇತಿಹಾಸವೇ ಇದೆ. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ 18 ತಿಂಗಳಲ್ಲಿ ಸಂವಿಧಾನಕ್ಕೆ ಚ್ಯುತಿ ತರುವ ಕೆಲಸವನ್ನ ಪದೇ ಪದೇ ಮಾಡುತ್ತಲೇ ಬಂದಿದೆ ಎಂದು ಗುಡಿಗಿದ್ದಾರೆ.
1.) ಭಾರತದ ಸಂವಿಧಾನದ ಪೀಠಿಕೆ ಆರಂಭವಾಗುವುದೇ ‘ಭಾರತದ ಜನತೆಯಾದ ನಾವು’ ಎಂದು. ಆದರೆ ಸಂವಿಧಾನವನ್ನ ರಕ್ಷಿಸಬೇಕಾದ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಕೂಗುತ್ತಾರೆ. ಆ ದೇಶದ್ರೋಹಿಗಳ ಹೆಡೆಮುರಿ ಕಟ್ಟಬೇಕಾದ ಕಾಂಗ್ರೆಸ್ ಸರ್ಕಾರ ಅದನ್ನ ಸಮರ್ಥನೆ ಮಾಡಿಕೊಳ್ಳುತ್ತದೆ. ಸುದ್ದಿ ಬಿತ್ತರ ಮಾಡಿದ ಮಾಧ್ಯಮಗಳ ಮೇಲೇ ಗೂಬೆ ಕೂರಿಸುವ ಕೆಲಸ ಮಾಡುತ್ತದೆ.
2.) ದೇಶದ ಸಾರ್ವಭೌಮತೆ, ಅಖಂಡತೆಯನ್ನ ಕಾಪಾಡಬೇಕಾದ ಚುನಾಯಿತ ಸರ್ಕಾರ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದಾಗ ಅದನ್ನ ಸಿಲಿಂಡರ್ ಬ್ಲಾಸ್ಟ್, business rivalry ಎಂದು ತಿಪ್ಪೆ ಸಾರಿಸುವ ಮೂಲಕ ದೇಶದ್ರೋಹಿಗಳನ್ನು ರಕ್ಷಿಸುವ ಪ್ರಯತ್ನ ಮಾಡಿದೆ.
3.) ಪರಿಶಿಷ್ಟ ಸಮುದಾಯಗಳ ಅಭ್ಯುದಯಕ್ಕೆ ಕೆಲಸ ಮಾಡಬೇಕಾದ ಸರ್ಕಾರ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿವಿಯೋಗವಾಗಬೇಕಾದ ವಾಲ್ಮೀಕಿ ಅಭಿವೃದ್ಧಿ ನಿಗಮದ 182 ಕೋಟಿ ಲೂಟಿ ಮಾಡಿ ಪರಿಶಿಷ್ಟ ಪಂಗಡಗಳಿಗೆ ಅನ್ಯಾಯ ಮಾಡಿದೆ.
4.) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ಸುಮಾರು 6,162 ಕೋಟಿ ರೂಪಾಯಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಹಣವನ್ನ ದುರುಪಯೋಗ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ಅನ್ಯಾಯ ಮಾಡುವ ಮೂಲಕ ಸಂವಿಧಾನದ ಆಶಯಗಳಿಗೆ ಎಳ್ಳು ನೀರು ಬಿಟ್ಟಿದೆ.
5.) ಮೂಡಾ ಹಗರಣದಲ್ಲಿ ಮಾನ್ಯ ಹೈಕೋರ್ಟ್ ಕೊಟ್ಟಿರುವ ತೀರ್ಪನ್ನ political judgement ಎಂದು ಹೀಗಳೆಯುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದೆ ಈ ಕಾಂಗ್ರೆಸ್ ಸರ್ಕಾರ.
6.) ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಲಾಂಛನಗಳಿಗೆ ಗೌರವ ಕೊಡಬೇಕಾದ ಸರ್ಕಾರ, ಪ್ಯಾಲೆಸ್ತೀನ್ ಧ್ವಜ ಹಾರಿಸಿದರೆ ತಪ್ಪೇನು ಎಂದು ಕೇಳುತ್ತದೆ.
7.) ಸಂವಿಧಾನ ಸಮಾವೇಶದ ಹೆಸರಿನಲ್ಲಿ ನಗರ ನಕ್ಸಲ್ ಗಳಿಗೆ, ಭಾರತದ ಸೈನಿಕರು ರೇಪಿಸ್ಟ್ ಗಳು ಎನ್ನುವ ವಿಕೃತ ಮನಸ್ಕರಿಗೆ ಸರ್ಕಾರಿ ಖರ್ಚಿನಲ್ಲಿ ವೇದಿಕೆ ಕಲ್ಪಿಸಿಕೊಟ್ಟಿದೆ ಈ ದೇಶದ್ರೋಹಿ ಕಾಂಗ್ರೆಸ್ ಸರ್ಕಾರ.
8.) ಶಾಸಕರ ಬಂಡಾಯ ಶಮನ ಮಾಡಲು ಸಂವಿಧಾನದ ನಿಯಮ ಉಲ್ಲಂಘಿಸಿ 90 ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸೃಷ್ಟಿಸುವ ಮೂಲಕ ಸಾರ್ವಜನಿಕರ ಹಣವನ್ನ ಪೋಲು ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ.
9.) ತಮ್ಮ ತುಷ್ಟೀಕರಣ ರಾಜಕಾರಣದ ತೃಷೆಗಾಗಿ ಸಾಂವಿಧಾನಿಕ ಹುದ್ದೆಗಳಿಗೆ ಪದೇ ಪದೇ ಅಪಮಾನ ಮಾಡುವ ಚಾಳಿ ಬೆಳೆಸಿಕೊಂಡಿರುವ ಶಾಸಕ ಜಮೀರ್ ಅಹ್ಮದ್ ಸಂವಿಧಾನಕ್ಕೆ ಅಪಚಾರ ಎಸಗುತ್ತಲೇ ಇದ್ದಾರೆ. ಮುಸ್ಲಿಂ ಸ್ಪೀಕರ್ ಮುಂದೆ ಬಿಜೆಪಿ ಶಾಸಕರು ತಲೆಬಾಗಬೇಕು ಎಂದು ಸ್ಪೀಕರ್ ಹುದ್ದೆಗೆ ಅಪಚಾರ ಎಸಗಿದ್ದ ಸಚಿವ ಜಮೀರ್ ಅಲ್ಲಿಗೆ ನಿಲ್ಲದೆ ಮುಸ್ಲಿಮರ ಕೆಲಸವನ್ನ ಸಚಿವರು ತಲೆಬಾಗಿ ಮಾಡಬೇಕು ಎಂದು ದುರಹಂಕಾರದ ಮಾತುಗಳನ್ನು ಆಡುವ ಮೂಲಕ ಸಂವಿಧಾನದ ಮೌಲ್ಯಗಳಿಗೆ ಅಪಮಾನ ಮಾಡಿದ್ದಾರೆ.
ಹೆಜ್ಜೆ ಹೆಜ್ಜೆಗೂ ಸಂವಿಧಾನಕ್ಕೆ ಅಪಚಾರ, ಅವಮಾನ, ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಲೇ ಇರುವ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯೂ ಇಲ್ಲ, ಅರ್ಹತೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಸಂವಿಧಾನ ದಿನದಂದು, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಪ್ರತಿಜ್ಞೆ ಮಾಡೋಣ. ಸಂವಿಧಾನದ ಮೌಲ್ಯಗಳು, ಆಶಯಗಳ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್ ಪಕ್ಷವನ್ನು ನಮ್ಮ ರಾಜ್ಯದಿಂದ ಬೇರು ಸಮೇತ ಕಿತ್ತೊಗೆಯುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದ್ದಾರೆ.