ದಾಂಪತ್ಯ ಸುಖಮಯವಾಗಿರಬೇಕೆಂದರೆ ದೈಹಿಕ ಸಂಬಂಧ ಕೂಡ ಬಹಳ ಮುಖ್ಯ. ಆದರೆ ಅನೇಕರು ಸಂಭೋಗದ ಸಮಯದಲ್ಲಿ ನೋವು ಅನುಭವಿಸುತ್ತಾರೆ. ಇದನ್ನು ವೈದ್ಯರ ಬಳಿ ಹೇಳಿ ಚಿಕಿತ್ಸೆ ಪಡೆಯಲು ಸಂಕೋಚಪಟ್ಟುಕೊಳ್ಳುತ್ತಾರೆ. ಆದರೆ ಈ ರೀತಿಯ ನೋವನ್ನು ಲಘುವಾಗಿ ಪರಿಗಣಿಸಬಾರದು. ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇದನ್ನು ಡಿಸ್ಪಾರುನಿಯಾ ಎಂದು ಕರೆಯಲಾಗುತ್ತದೆ.
ಡಿಸ್ಪಾರುನಿಯಾದ ಲಕ್ಷಣಗಳು…
ಡಿಸ್ಪಾರುನಿಯಾ ಸಮಸ್ಯೆಯಿದ್ದರೆ ಲೈಂಗಿಕ ಸಂಭೋಗದ ಸಮಯದಲ್ಲಿ ತೀವ್ರವಾದ ನೋವು ಕಂಡುಬರುತ್ತದೆ. ಪದೇ ಪದೇ ಸೊಂಟ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಈ ನೋವು ತೀವ್ರವಾಗಿರಬಹುದು. ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಲೈಂಗಿಕ ಸಂಭೋಗದ ಸಮಯದಲ್ಲಿ ತೀವ್ರವಾದ ಒತ್ತಡದಿಂದಲೂ ನೋವುಂಟಾಗಬಹುದು. ಕೆಲವೊಮ್ಮೆ ಭಾವನಾತ್ಮಕ ಅಂಶಗಳು ಕೂಡ ನೋವಿಗೆ ಕಾರಣವಾಗುತ್ತವೆ. ಋತುಬಂಧ ಅಥವಾ ಹೆರಿಗೆಯ ನಂತರ ಅಥವಾ ಸ್ತನ್ಯಪಾನ ಸಮಯದಲ್ಲಿ ಈಸ್ಟ್ರೊಜೆನ್ ಮಟ್ಟದಲ್ಲಿನ ಕುಸಿತವೂ ಇದಕ್ಕೆ ಕಾರಣವಾಗಬಹುದು.
ಕೆಲವು ಔಷಧಿಗಳು ಲೈಂಗಿಕ ಬಯಕೆ ಅಥವಾ ಉತ್ಸಾಹದ ಮೇಲೆ ಪರಿಣಾಮ ಬೀರುತ್ತವೆ. ಇದು ನಯಗೊಳಿಸುವಿಕೆಯನ್ನು ಕಡಿಮೆ ಮಾಡುತ್ತದೆ, ಪರಿಣಾಮ ಸಂಭೊಗ ನೋವಿನಿಂದ ಕೂಡಿರಬಹುದು. ಆ ಔಷಧಿಗಳಲ್ಲಿ ಖಿನ್ನತೆ ಶಮನಕಾರಿಗಳು, ಅಧಿಕ ರಕ್ತದೊತ್ತಡದ ಔಷಧಿಗಳು, ನಿದ್ರಾಜನಕಗಳು, ಆಂಟಿಹಿಸ್ಟಾಮೈನ್ಗಳು ಮತ್ತು ಕೆಲವು ಜನನ ನಿಯಂತ್ರಣ ಮಾತ್ರೆಗಳು ಸೇರಿವೆ.
ಲೈಂಗಿಕ ಸಂಭೋಗದ ಸಮಯದಲ್ಲಿ ಗಾಯ, ಆಘಾತ ಅಥವಾ ಸುಡುವ ಸಂವೇದನೆಯೂ ಕಾಣಿಸಿಕೊಳ್ಳುತ್ತದೆ. ಶ್ರೋಣಿಯ ಶಸ್ತ್ರಚಿಕಿತ್ಸೆ, ಸ್ತ್ರೀ ಸುನ್ನತಿ ಅಥವಾ ಹೆರಿಗೆಯ ಸಮಯದಲ್ಲಿ ಮಾಡುವ ಎಪಿಸಿಯೊಟೊಮಿಯಿಂದಲೂ ಸಂಭೋಗದ ವೇಳೆ ನೋವುಂಟಾಗುತ್ತದೆ.
ಎಂಡೊಮೆಟ್ರಿಯೊಸಿಸ್, ಶ್ರೋಣಿಯ ಉರಿಯೂತದ ಕಾಯಿಲೆ, ಗರ್ಭಾಶಯದ ಹಿಗ್ಗುವಿಕೆ, ಹಿಮ್ಮುಖ ಗರ್ಭಾಶಯ, ಗರ್ಭಾಶಯದ ಫೈಬ್ರಾಯ್ಡ್‌ಗಳು, ಸಿಸ್ಟೈಟಿಸ್, ಅಡೆನೊಮೈಯೋಸಿಸ್, ಹೆಮೊರೊಯಿಡ್ಸ್‌ನಂತಹ ತೊಂದರೆಗಳಿದ್ದಾಗಲೂ ಮಹಿಳೆಯರು ಲೈಂಗಿಕ ಸಂಬಂಧಕ್ಕೆ ತೊಡಕು ಎದುರಿಸುತ್ತಾರೆ.
ಎಕ್ಸ್‌ರೇ ಮತ್ತು ಕೀಮೋಥೆರಪಿಯಂತಹ ಕ್ಯಾನ್ಸರ್ ಚಿಕಿತ್ಸೆಗಳು ಸಹ ಸಂಭೋಗಕ್ಕೆ ಅಡ್ಡಿಮಾಡುತ್ತವೆ. ಈ ರೀತಿಯ ತೊಂದರೆಗಳು ಎದುರಾದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ.