ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ಹೆಸರಲ್ಲಿ ಸಂಚಾರಿಗಳಿಗೆ ಸುಖಾಸುಮ್ಮನೇ ತೊಂದರೆ ಕೊಡಲು ಮುಂದಾಗಿರುವ ತನ್ನದೇ ಕೆಲ ಸಿಬ್ಬಂದಿ ವಿರುದ್ಧ ಬೆಂಗಳೂರು ಸಂಚಾರ ಪೊಲೀಸ್ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ರಸ್ತೆಗಳ ಮೇಲೆ ಸಂಚಾರಿ ಪೊಲೀಸ್ ಪೇದೆಗಳಿಗೆ ದಂಡ ಸಂಗ್ರಹಿಸುವ ಅಧಿಕಾರವಿಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸಂಚಾರಿ ಪೊಲೀಸ್ ತಿಳಿಸಿದೆ. ಸಹಾಯಕ-ಸಬ್ ಇನ್ಸ್‌ಪೆಕ್ಟರ್ ದರ್ಜೆಯ ಮೇಲಿನ ಅಧಿಕಾರಿಗಳಿಗೆ ಮಾತ್ರವೇ, ತೋಳಿನ ಮೇಲೆ ಒಂದು ಸ್ಟಾರ್‌ನ ಮೇಲ್ಪಟ್ಟವರು, ದಂಡ ಸಂಗ್ರಹಿಸಬಹುದು ಎಂದು ತಿಳಿಸಲಾಗಿದೆ.
ಐಎಸ್‌ಐ ಪ್ರಮಾಣೀಕೃತವಲ್ಲದ ಹೆಲ್ಮೆಟ್ ಧರಿಸಿದ್ದಾರೆ ಎಂಬ ಕಾರಣಕ್ಕೆ ಸವಾರರೊಬ್ಬರಿಂದ 100 ರೂ. ದಂಡ ವಸೂಲಿ ಮಾಡಿದ ಸಂಚಾರಿ ಪೊಲೀಸ್ ಪೇದೆಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದ ಸಂಚಾರಿ ಠಾಣೆಯ ಪೇದೆ ಪವನ್ ದ್ಯಾಮಣ್ಣವರ್ ಎಂದು ಹೇಳಲಾಗಿದೆ. ಫೆಬ್ರವರಿ 4ರ ಮಧ್ಯಾಹ್ನ ಈ ಘಟನೆ ನಡೆದಿದೆ.
ಕೊರೋನಾದಿಂದ ಮೃತಪಟ್ಟ ಸ್ನೇಹಿತನ ಪತ್ನಿಗೆ ಬಾಳು ಕೊಟ್ಟ ಗೆಳೆಯ
“ಅಧಿಕಾರದ ವ್ಯಾಪ್ತಿ ಮೀರಿ, ಸಂಚಾರಿಯನ್ನು ನಿಲ್ಲಿಸಿ ದಂಡ ಕಿತ್ತದ್ದಲ್ಲದೇ, ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಪೇದೆಯನ್ನು ಅಮಾನತುಗೊಳಿಸಲಾಗಿದೆ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಇಲಾಖೆ, “ಎಎಸ್‌ಐ ಮೇಲ್ಪಟ್ಟ ಅಧಿಕಾರಿಗಳು ಮಾತ್ರವೇ ಸ್ಥಳದಲ್ಲೇ ದಂಡ ಹಾಕಬಹುದಾಗಿದ್ದು, ಪೇದೆಗಳಿಗೆ ಈ ಅಧಿಕಾರವಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇವೆ” ಎಂದು ತಿಳಿಸಿದೆ.
ಕಳೆದ 15 ದಿನಗಳಿಂದ ಬೀದಿ ಬದಿಯಲ್ಲಿ ಹೆಲ್ಮೆಟ್ ಮಾರಾಟ ಮಾಡುತ್ತಿರುವ ಮಂದಿಯ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಸಂಚಾರಿಗಳಲ್ಲಿ ಒಳ್ಳೆಯ ಗುಣಮಟ್ಟದ ಹೆಲ್ಮೆಟ್‌ಗಳನ್ನು ಮಾತ್ರವೇ ಬಳಸಲು ಜಾಗೃತಿ ಅಭಿಯಾನಕ್ಕೂ ಮುಂದಾಗಿದೆ.