ನಂದ್ಯಾಲ: ಕಾನ್ಸ್ ಟೇಬಲ್ ಓರ್ವರು ಪತ್ನಿ ಜೀವಂತವಾಗಿದ್ದರೂ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಆಕೆಯ ಹೆಸರಲ್ಲಿದ್ದ ಜಮೀನು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ನಂದ್ಯಾಲ ತಾಲೂಕಿನ ಮಂಗಳಗಿರಿಯಲ್ಲಿ ಈ ಘಟನೆ ನಡೆದಿದೆ. ಮಂಗಳಗಿರಿಯ ಎಪಿಎಸ್ ಪಿ ಬೆಟಾಲಿಯನ್ ನಲ್ಲಿ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಶಂಕರ್ ಪತ್ನಿಗೆ ವಂಚಿಸಿದ ಆರೋಪಿ.
ಶಿವಶಂಕರ್ 16 ವರ್ಷಗಳ ಹಿಂದೆ ಮಾಧವಿ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಕೆಲ ವರ್ಷಗಳ ಹಿಂದೆ ಶಿವಶಂಕರ್ ಹಾಗೂ ಮಾಧವಿ ನಡುವೆ ಮನಸ್ತಾಪವುಂಟಾಗಿ, ಮಾಧವಿ ತನ್ನ ಇಬ್ಬರು ಮಕ್ಕಳೊಂದಿಗೆ ಗುಂಟೂರಿನಲ್ಲಿ ಪೋಷಕರೊಂದಿಗೆ ವಾಸವಾಗಿದ್ದರು.
ಮಾಧವಿ ನಂದ್ಯಾಲದ ಜಿಲ್ಲೆಯ ರೈತನಗರದಲ್ಲಿ ಸ್ವಲ್ಪ ಜಮೀನು ಹೊಂದಿದ್ದರು. ಆ ಜಮೀನಿಗೆ ಒಳ್ಳೆ ಬೆಲೆ ಬಂದಿರುವುದನ್ನು ತಿಳಿದ ಪತಿ ಶಿವಶಂಕರ್ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ಜಮೀನಿನ ದಾಖಲೆ ಪತ್ರಗಳನ್ನು ಸೃಷ್ಟಿ ಮಾಡಿ ಜಮೀನು ಮಾರಾಟ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪತ್ನಿ ಮಾಧವಿ ನಂದ್ಯಾಲ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾನ್ಸ್ ಟೇಬಲ್ ಶಿವಶಂಕರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಶಿವಶಂಕರ್ ತಲೆಮರೆಸಿಕೊಂಡಿದ್ದಾರೆ.