ರಾಜ್ಯದಲ್ಲಿ ರೋಬೋಟ್ , ಡ್ರೋಣ್ ಮೂಲಕ ಐಸಿಸ್ ಉಗ್ರರು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ ಸಂಬಂಧ ಕೋರ್ಟ್ ಗೆ ಸಲ್ಲಿಸಿದ ಎನ್ ಐ ಎ ( NIA) ಚಾರ್ಜ್ ಶೀಟ್ ನಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದೆ.
ಬಂಧಿತ ಐವರು ಇಂಜಿನಿಯರಿಂಗ್ ಪದವೀಧರರಿಗೆ ರೋಬೋಟ್ ಮತ್ತು ಡ್ರೋಣ್ ಬಳಕೆಯ ಮೂಲಕ ವಿಧ್ವಂಸಕ ಕೃತ್ಯ ನಡೆಸಲು ಐಸಿಸ್ ಉಗ್ರರು ಟಾರ್ಗೆಟ್ ನೀಡಿದ್ದರು ಎನ್ನುವ ವಿಚಾರ ಬಯಲಾಗಿದೆ. ಶಿವಮೊಗ್ಗ ಜಿಲ್ಲೆಯ ತುಂಗಾ ನದಿ ತೀರ ಮತ್ತು ಬಂಟ್ವಾಳದ ನೇತ್ರಾವದಿ ನದಿ ತೀರದ ನಿರ್ಜನ ಪ್ರದೇಶದಲ್ಲಿ ಬಾಂಬ್ ಸ್ಪೋಟದ ಟ್ರಯಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಅಧಿಕಾರಿಗಳು ದೆಹಲಿ ಕೋರ್ಟ್ ಗೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಚಾರ್ಜ್ ಶೀಟ್ ನಲ್ಲಿ ಈ ವಿಚಾರಗಳು ಬಯಲಾಗಿದೆ.
ಪ್ರಕರಣ ಸಂಬಂಧ ಮಾಝಿನ್, ಅಬ್ದುಲ್ ರಹಿಮಾನ್, ನದೀಮ್ ಅಹ್ಮದ್, ಮಾಜ್ ಮುನೀರ್ ಅಹ್ಮದ್, ಸೈಯದ್ ಯಾಸೀನ್, ರೀಶಾನ್ ತಾಜುದ್ದೀನ್ ಶೇಖ್, ನನ್ನು ಬಂಧಿಸಲಾಗಿದ್ದು, ಆರೋಪಿಗಳು ಎಂಜಿನಿಯರಿಂಗ್ ಕಲಿಯುತ್ತಿರುವಾಗಲೇ ಐಸಿಸ್ ಪ್ರೇರಣೆ ಪಡೆದು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಆರೋಪಿಗಳಿಗೆ ವಿದೇಶದಿಂದಲೇ ತರಬೇತಿ ನೀಡಲಾಗಿದ್ದು, ವಿಧ್ವಂಸಕ ಕೃತ್ಯ ಎಸಗಲು ರೋಬೋಟಿಕ್ ತಂತ್ರಜ್ಞಾನ, ಡ್ರೋಣ್ ಬಳಕೆ ಬಗ್ಗೆ ಪರಿಣತಿ ಸಾಧಿಸುವಂತೆ ಟಾರ್ಗೆಟ್ ನೀಡಿದ್ದರು. ರೋಬೋಟಿಕ್ ಕೋರ್ಸ್ ಪಡೆಯುವಂತೆ ಐಸಿಸ್ ಉಗ್ರರು ಸಲಹೆ ನೀಡಿದ್ದರು ಎಂಬ ವಿಚಾರ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ.