ನವದೆಹಲಿ: ಬಿಜೆಪಿ ಸರ್ಕಾರ ‘ತುಷ್ಟಿಕರಣ’ವನ್ನು ಅನುಸರಿಸದೆ ‘ಸಂತುಷ್ಟಿಕರಣ’ವನ್ನು ಅನುಸರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ‘ಇಂಡಿಯಾ’ ಬ್ಲಾಕ್ ಸಂಸದರ ನಿರಂತರ ಘೋಷಣೆಗಳ ನಡುವೆ ಪ್ರತಿಪಕ್ಷಗಳು ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಂದೂಗಳ ವಿರುದ್ಧ ಸುಳ್ಳು ಆರೋಪ ಹೊರಿಸಲು ಸಂಚು ರೂಪಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಪ್ರತಿಪಕ್ಷದ ಸದಸ್ಯರು ‘ಮಣಿಪುರಕ್ಕೆ ನ್ಯಾಯ’ ಎಂದು ಕೂಗಲು ಪ್ರಾರಂಭಿಸಿದರಲ್ಲದೇ, ಪ್ರತಿಭಟಿಸಲು ಸದನದ ಬಾವಿಗೆ ಪ್ರವೇಶಿಸಿದಾಗ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸುಮ್ಮನಿರುವಂತೆ ಸೂಚಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಮೋದಿ, ಕಾಂಗ್ರೆಸ್‌ಗೆ ಜನಾದೇಶವೆಂದರೆ ಅದು ಇರುವಲ್ಲಿಯೇ ಪ್ರತಿಪಕ್ಷವಾಗಿ ಕುಳಿತುಕೊಳ್ಳುವುದು. ತುಷ್ಟೀಕರಣ ರಾಜಕಾರಣವನ್ನು ದೇಶ ಬಹುಕಾಲ ನೋಡಿದೆ. ನಾವು ತುಷ್ಟಿಕರಣವನ್ನಲ್ಲ ’ಸಂತುಷ್ಟಿಕರಣ’ವನ್ನು ಅನುಸರಿಸಿದ್ದೇವೆ. ಎಲ್ಲರಿಗೂ ನ್ಯಾಯ ಎಂಬುದು ನಮ್ಮ ಧ್ಯೇಯವಾಗಿದೆ. ನಾವು ನಿನ್ನೆ ಲೋಕಸಭೆಯಲ್ಲಿ ಬಾಲಿಶ ವರ್ತನೆಯನ್ನು ನೋಡಿದ್ದೇವೆ. ರಾಹುಲ್ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ, ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆ ಮತ್ತು ಹಲವಾರು ಮಾನನಷ್ಟ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.