ಹಿಂದೂ ವಿವಾಹ ಕಾಯ್ದೆ ಅಡಿ ವಿಚ್ಛೇದನ ಕೋರಿದ ಪ್ರಕರಣಗಳ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂತಹ ಪ್ರಕರಣಗಳಲ್ಲಿ ವಸ್ತುನಿಷ್ಠವಾಗಿ ಆಲೋಚಿಸುವುದಕ್ಕಿಂತಲೂ ಅದನ್ನು ಅನುಭವಿಸುವ ವ್ಯಕ್ತಿಯ ದೃಷ್ಟಿಯಿಂದ ಅವಲೋಕಿಸುವುದು ಸೂಕ್ತ ಎಂದು ಹೇಳಿದೆ.
ವಿಚ್ಛೇದನ ಪ್ರಕರಣಗಳಲ್ಲಿ ಮಹಿಳೆ ಪಾಲಿಗೆ ಕ್ರೌರ್ಯ ಎನಿಸುವುದು, ಪುರುಷನಿಗೆ ಆ ಅನುಭವ ಆಗಿರಲಿಕ್ಕಿಲ್ಲ. ಅದೇ ರೀತಿ ಪುರುಷನರಿಗೆ ಕ್ರೌರ್ಯ ಎನಿಸುವುದು, ಮಹಿಳೆಯ ಅನುಭವಕ್ಕೆ ಬಂದಿರುವುದಿಲ್ಲ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಸಮಗ್ರ ಅವಲೋಕನ ಅಗತ್ಯವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಮಹಿಳೆಯೊಬ್ಬರು ಸಲ್ಲಿಸಿದ್ದ ವಿಚ್ಛೇದನ ಪ್ರಕರಣ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಂ.ಎಂ. ಸುಂದರೇಶ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿ 15 ವರ್ಷಗಳ ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿದ ಮಹಿಳೆಯ ಅರ್ಜಿಯನ್ನು ಪುರಸ್ಕರಿಸಿದೆ.