ಬೆಂಗಳೂರು: ತಪ್ಪಿತಸ್ಥ ನೌಕರನಿಗೆ ಶಿಕ್ಷೆ ವಿಧಿಸುವಾಗ ಬಡ್ತಿ ಅಂಶ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ತಪ್ಪಿತಸ್ಥ ನೌಕರನಿಗೆ ನೀಡುವ ಶಿಕ್ಷೆಯು ಆತ ಎಸಗಿದ ಅಪರಾಧಕ್ಕೆ ಅನುಗುಣವಾಗಿರಬೇಕು. ಆ ವೇಳೆ ಆತ ಸುದೀರ್ಘವಾಗಿ ಕಳಂಕ ರಹಿತನಾಗಿ ಸೇವೆ ಸಲ್ಲಿಸಿದ ಅವಧಿ, ಆತ ಪಡೆದಿರುವ ಬಡ್ತಿ, ನಿವೃತ್ತಿಗೆ ಇರುವ ಸಮಯ ಮತ್ತಿತರ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಸಿಂಡಿಕೇಟ್ ಬ್ಯಾಂಕ್ ನ ಮಾಜಿ ಉದ್ಯೋಗಿ ಬೆಂಗಳೂರಿನ ನಾಗರಬಾವಿ ನಿವಾಸಿ ಎಂ.ಆರ್. ನಾಗರಾಜನ್ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ರಾಮಚಂದ್ರ ಅವರಿದ್ದ ವಿಭಾಗೀಯ ಪೀಠ ಭಾಗಶಃ ಮಾನ್ಯ ಮಾಡಿದೆ.
ಈ ಹಂತದಲ್ಲಿ ವಜಾ ಆದೇಶ ರದ್ದುಗೊಳಿಸುವುದು ಮತ್ತು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಲಾಗದು. ಈಗಾಗಲೇ ಸೇವಾ ಅವಧಿ ಪೂರೈಸಿ ಅರ್ಜಿದಾರರು ನಿವೃತ್ತರಾಗಿದ್ದಾರೆ. 1979 ರಲ್ಲಿ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ ಸೇವೆಗೆ ಸೇರಿದ ಅರ್ಜಿದಾರರು 1996ರಲ್ಲಿ ಮೊದಲ ಬಡ್ತಿ ಪಡೆದು ಅಧಿಕಾರಿಯಾಗಿದ್ದಾರೆ. ಮರು ವರ್ಷವೇ ಮ್ಯಾನೇಜರ್ ಆಗಿ ಬಡ್ತಿ ಹೊಂದಿದ್ದಾರೆ. ಸ್ಟಾರ್ ಪರ್ಫಾಮರ್ ಪ್ರಶಸ್ತಿ ಪಡೆದಿದ್ದಾರೆ. 400 ಕೋಟಿ ಸಾಲ ವಸೂಲಿ ಮಾಡಿ ಉತ್ತಮ ಉದ್ಯೋಗಿ ಎಂದು ಪ್ರಮಾಣ ಪತ್ರ ಪಡೆದಿದ್ದಾರೆ. ಹಾಗಾಗಿ ಈ ಅಂಶ ಪರಿಗಣಿಸಬೇಕಾಗುತ್ತದೆ. ಆದರೆ, ಸಂಪೂರ್ಣವಾಗಿ ಕ್ಲೀನ್ ಚಿಟ್ ನೀಡಲಾಗದು. ಬದಲಿಗೆ ಬ್ಯಾಂಕ್ ಸೇವೆಯಿಂದ ವಜಾಗೊಳಿಸುವ ಬದಲು ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.