ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಜಿ ಸಂಸತ್ ಸದಸ್ಯೆಯಾಗಿರುವ ಅವರು ರಾಜೀನಾಮೆಯನ್ನು ಪಕ್ಷದ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜೊತೆಗಿನ ನನ್ನ ಮೂರು ದಶಕಗಳ ಸುದೀರ್ಘ ಒಡನಾಟವನ್ನು ನಾನು ಗೌರವಿಸುತ್ತೇನೆ. ನನ್ನ ಸ್ಮರಣೀಯ ಪ್ರಯಾಣದ ಭಾಗವಾಗಿರುವ ಪಕ್ಷ, ಅದರ ಎಲ್ಲಾ ನಾಯಕರು, ಸದಸ್ಯರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ಸೋನಿಯಾ ಗಾಂಧಿಗೆ ಬರೆದಿದ್ದಾರೆ.
ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವುದಾಗಿ ಹೇಳಿರುವ ಅವರು, ಪಕ್ಷದ ವಾಟ್ಸಾಪ್ ಗುಂಪುಗಳನ್ನು ತೊರೆದಿದ್ದಾರೆ. ಅಸ್ಸಾಂ ರಾಜ್ಯದ ಕಾಂಗ್ರೆಸ್ ನಾಯಕಿ ಸುಷ್ಮಿತಾ ದೇವ್ ಟ್ವಿಟರ್ ಪ್ರೊಫೈಲ್ ಬದಲಿಸಿ ಕಾಂಗ್ರೆಸ್ ಮಾಜಿ ಸದಸ್ಯೆ ಎಂದು ಬದಲಿಸಿದ್ದಾರೆ.