ನಾಗಪುರ: 2024ರ ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ ನಡೆಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ನ 139ನೇ ಸಂಸ್ಥಾಪನಾ ದಿನದ ಅಂಗವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಗುರುವಾರ ನಡೆದ ಪಕ್ಷದ ‘ಹೈಂ ತೈಯಾರ್ ಹಮ್’ ರ್ಯಾಲಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ನಿರುದ್ಯೋಗ ಕಳೆದ 40 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ದೇಶದಲ್ಲಿ ಎರಡು ಸಿದ್ಧಾಂತಗಳ ನಡುವೆ ಸಮರ ನಡೆಯುತ್ತಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆ ಎರಡು ಸಿದ್ಧಾಂತಗಳ ಸಮರವಾಗಲಿದೆ. ಎನ್‌ಡಿಎ ಮತ್ತು ಐಎನ್‌ಡಿಐಎ ಬ್ಲಾಕ್‌ನಲ್ಲಿ ಹಲವಾರು ಪಕ್ಷಗಳಿವೆ, ಆದರೆ, ಯುದ್ಧವು ಎರಡು ಸಿದ್ಧಾಂತಗಳ ನಡುವೆ ನಡೆಯಲಿದೆ ಎಂದು ಹೇಳಿದ್ದಾರೆ.