ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕುರಿತಂತೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರ ಮುಂದಾಳತ್ವದಲ್ಲಿ ಎದುರಿಸಲಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾವುದೇ ಪಕ್ಷದ ಜೊತೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ ಘಟ್ಬಂಧನ್ಗೆ ನಮ್ಮ ಹೃದಯಲ್ಲಿ ಸ್ಥಾನವಿದೆ. ಯಾರಾದರೂ ನಮ್ಮ ಪಕ್ಷದಲ್ಲಿ ಸೇರ್ಪಡೆಯಾಗಲು ಇಚ್ಚಿಸಿದರೆ ಅವರಿಗೆ ಸ್ವಾಗತಿದೆ ಎಂದು ಖುರ್ಷಿದ್ ಹೇಳಿದ್ರು.
ಉತ್ತರ ಪ್ರದೇಶದ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೂ ಉತ್ತರಿಸಿದ ಖುರ್ಷಿದ್, ನಾವು ಪ್ರಿಯಾಂಕಾ ಗಾಂಧಿ ವಾದ್ರಾರ ಮುಂದಾಳತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಲಿದ್ದೇವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನ್ನು ಗೆಲ್ಲಿಸಲು ಪ್ರಿಯಾಂಕ ಪರಿಶ್ರಮ ಪಡುತ್ತಿದ್ದಾರೆ. ಬಳಿಕ ಅವರೇ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸಬಹುದು ಎಂದು ಹೇಳಿದ್ರು.
ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಣಾಳಿಕೆ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ನಾವು ಸಾಮಾನ್ಯರ ಜೊತೆ ಚರ್ಚೆ ನಡೆಸುತ್ತಿದ್ದೇವೆ. ಇದಕ್ಕಾಗಿ ನಾವು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇವೆ. ಕಾಂಗ್ರೆಸ್ನ ಪ್ರಣಾಳಿಕೆಯು ಸಾಮಾನ್ಯ ಜನರ ಧ್ವನಿಯೇ ಆಗಿರಲಿದೆ. ರೈತರು ಹಾಗೂ ಮಹಿಳೆಯರ ಸುರಕ್ಷತೆಗೆ ಪ್ರಣಾಳಿಕೆಯು ಹೆಚ್ಚಿನ ಆದ್ಯತೆ ನೀಡಲಿದೆ. ಇದು ಮಾತ್ರವಲ್ಲದೇ ಪ್ರಣಾಳಿಕೆಯಲ್ಲಿ ಆರೋಗ್ಯ ಕ್ಷೇತ್ರದ ಕಡೆಯೂ ಪ್ರಾಶಸ್ತ್ಯ ನೀಡಲಾಗಿದೆ. ಏಕೆಂದರೆ ದೇಶಕ್ಕೆ ಕೊರೊನಾ ಬಂದಾಗಿನಿಂದ ನಮ್ಮ ಆರೋಗ್ಯ ಇಲಾಖೆ ವ್ಯವಸ್ಥೆಯು ಎಷ್ಟು ದುರ್ಬಲವಾಗಿದೆ ಎಂಬ ವಿಚಾರ ಜಗಜ್ಜಾಹಿರಾಗಿದೆ. ಹೀಗಾಗಿ ಆರೋಗ್ಯ ಕ್ಷೇತ್ರವನ್ನ ಅಭಿವೃದ್ಧಿ ಪಡಿಸುವ ಅನಿವಾರ್ಯತೆ ಇದೆ ಎಂದು ಹೇಳಿದ್ರು.