ಕಲಬುರಗಿ : ಮುಂದಿನ 5 ವರ್ಷ ಇನ್ನೂ ಹಲವಾರು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ಲೋಕಸಭಾ ಕ್ಷೇತ್ರದ ಕಮಲಾಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ‘ ನಿಮ್ಮ ಮತದ ಶಕ್ತಿಯ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಜೊತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದು ನುಡಿದಂತೆ ನಡೆದ ಸರ್ಕಾರವಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ ₹52,000 ಕೋಟಿ ಬೇಕಾಗುತ್ತದೆ. ಆದರೂ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿ ನಮ್ಮ ಯೋಜನೆಗಳನ್ನು ಬಿಟ್ಟಿಭಾಗ್ಯ ಎಂದು ಟೀಕಿಸಿದೆ. ಆದರೆ ನಮ್ಮ ಸರ್ಕಾರ ಜನರು ಕಟ್ಟಿದ ತೆರಿಗೆಯನ್ನೇ ಗ್ಯಾರಂಟಿ ಯೋಜನೆಗಳ ಮೂಲಕ ವಾಪಸ್ ಕೊಟ್ಟಿದ್ದೇವೆ. ಬಿಜೆಪಿಗರು ಇಂತಹ ಯಾವುದಾದರು ಒಂದು ಯೋಜನೆ ಜಾರಿಗೆ ತಂದಿದ್ದರೆ ಹೇಳಲಿ.
ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಸಂಸದ ಉಮೇಶ ಜಾಧವ ಅವರು ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯ ಅಭಿವೃದ್ದಿ ಮಾಡುವಲ್ಲಿ ಕೂಡಾ ವಿಫಲರಾಗಿರುವ ಸಂಸದರು, ಜಿಲ್ಲೆಗೆ ಕೇವಲ ಐದು ಅಭಿವೃದ್ಧಿ ಕೆಲಸಗಳನ್ನು ತೋರಿಸಲಿ. ಕೋಲಿ, ಕಬ್ಬಲಿಗ ಸಮಾಜವನ್ನ ST ಪಂಗಡಕ್ಕೆ ಸೇರಿಸುತ್ತೇನೆ ಎಂದು ಭರವಸೆ ನೀಡಿದ್ದರು ಈಗ ಅದನ್ನು ಮಾಡಲಿಲ್ಲ.
ಯುವಕರ ಉಜ್ವಲ ಭವಿಷ್ಯಕ್ಕಾಗಿ, ರೈತರ ಕೂಲಿ ಕಾರ್ಮಿಕರ ಬದುಕಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ. ಮುಂದಿನ ಐದು ವರ್ಷ ನಿಮಗಾಗಿ ಇನ್ನೂ ಹಲವಾರು ಗ್ಯಾರಂಟಿಗಳನ್ನು ನಾವು ಕೊಡುತ್ತೇವೆ ಎಂದು ಭರವಸೆ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ನಿಮ್ಮ ಮತ ನೀಡಬೇಕು ಎಂದು ಮನವಿ ಮಾಡಿದರು.