ನವದೆಹಲಿ: ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಜೂನ್ 11 ರಂದು ದೇಶಾದ್ಯಂತ ಪ್ರತಿಭಟನೆ ಕೈಗೊಂಡಿದೆ.
ರಾಷ್ಟ್ರದಾದ್ಯಂತ ಪೆಟ್ರೋಲ್ ಪಂಪ್ ಗಳ ಎದುರು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು. ಹೆಚ್ಚುತ್ತಿರುವ ಹಣದುಬ್ಬರವನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.
ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ಹಣದುಬ್ಬರ ಅನಿಯಂತ್ರಿತವಾಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಅಡುಗೆ ಅನಿಲ ದರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಬಾರಿ ಏರಿಕೆಯಾಗುತ್ತಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ ಹೇಳಿದ್ದಾರೆ.
ರಾಜಸ್ಥಾನದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿತ್ತು. ನಂತರ ದೇಶದ ಅನೇಕ ಮಹಾನಗರಗಳಲ್ಲಿ, ಜಿಲ್ಲೆಗಳಲ್ಲಿಯೂ ಪೆಟ್ರೋಲ್ ದರ 100 ರೂಪಾಯಿ ಗಡಿದಾಟಿದೆ. ಕಳೆದ ವರ್ಷ ಜೂನ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ದರ 74.93 ರೂಪಾಯಿ ಇತ್ತು. ವರ್ಷ ಜೂನ್ ನಲ್ಲಿ 25 ರೂ.ಗಿಂತಲೂ ಜಾಸ್ತಿಯಾಗಿ 100 ರೂಪಾಯಿ ಗಡಿದಾಟಿದೆ. ಇದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಕೈಗೊಂಡಿದೆ.