ಬೆಂಗಳೂರು: ಡಿಸೆಂಬರ್ 5ರಂದು ಹಾಸನದಲ್ಲಿ ಆಯೋಜಿಸಲಾಗಿದ್ದ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ಸ್ವಾಭಿಮಾನಿ ಸಮಾವೇಶದ ಸಂಪೂರ್ಣ ಚಿತ್ರಣವೇ ಇದೀಗ ಬದಲಾಗಿದೆ. ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಸಮಾವೇಶಕ್ಕೆ ಕಾಂಗ್ರೆಸ್ ನ ಕೆಲ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮುಖಂಡರ ಸಭೆ ನಡೆಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸ್ವಾಭಿಮಾನಿ ಸಮಾವೇಶದ ರೂಪುರೇಷೆ ಬದಲಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹಾಸನದಲ್ಲಿ ಮಾತ್ರವಲ್ಲ ರಾಜ್ಯದ ಪ್ರತಿ ವಿಭಾಗಮಟ್ಟದಲ್ಲಿಯೂ ಸಭೆ ನಡೆಸಲಾಗುವುದು. ಇದು ಕಾಂಗ್ರೆಸ್ ಪಕ್ಷದ ಸಮಾವೇಶ ಆಗಿದ್ದು, ನನ್ನ ಮುಂದಾಳತ್ವದಲ್ಲಿಯೇ ಸಮಾವೇಶ ನಡೆಯಲಿದೆ. ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ ಎಂದರು.
ಎಲ್ಲೆಲ್ಲಿ ಕಳೆದುಕೊಂಡಿದ್ದೇವೆ ಅಲ್ಲಿಯೇ ಹುಡುಕಬೇಕು ಎಂಬುದು ನಮ್ಮ ಆಸೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡ ಸದ್ಯದಲ್ಲಿಯೇ ಬರಲಿದೆ. ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿಯೂ ಕೃತಜ್ಞತೆ ಸಮಾವೇಶ ನಡೆಸಲಾಗುವುದು. ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.