ನವದೆಹಲಿ: ಪ್ರಧಾನಿ ಮೋದಿಯವರು ಹೊಸ ವರ್ಷದ ಉಡುಗೊರೆಯಾಗಿ 81 ಕೋಟಿ ಬಡವರ ಪಡಿತರವನ್ನು 50 ಪರ್ಸೆಂಟ್ ಕಡಿತಗೊಳಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಹೊಸ ವರ್ಷದಲ್ಲಿ ಮೋದಿ ಸರ್ಕಾರ 81 ಕೋಟಿ ಬಡವರ ಪಡಿತರವನ್ನು ಶೇಕಡ 50 ರಷ್ಟು ಕಡಿಮೆ ಮಾಡಿದೆ. 10 ಕಿಲೋಗ್ರಾಂಗಳಷ್ಟು ಆಹಾರಧಾನ್ಯಕ್ಕೆ ಅರ್ಹರಾಗಿದ್ದ 81 ಕೋಟಿ ಭಾರತೀಯರು ಈಗ ಕೇವಲ ಐದು ಕೆಜಿ ಧಾನ್ಯ ಪಡೆಯುತ್ತಾರೆ ಎಂದು ವಿರೋಧ ಪಕ್ಷ ಹೇಳಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ(NFSA) ಅಡಿಯಲ್ಲಿ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಆಹಾರ ಧಾನ್ಯಗಳನ್ನು ಒದಗಿಸಿದ ಪ್ರಧಾನ ಮಂತ್ರಿ ಗರೀಬ್ ಅನ್ನ ಕಲ್ಯಾಣ್ ಯೋಜನೆ(PMGKAY) ಅನ್ನು ಪ್ರಧಾನಿ ಮೋದಿಯವರ ಕ್ಯಾಬಿನೆಟ್ ಸ್ಥಗಿತಗೊಳಿಸಿದೆ ಎಂಬ ಖಿನ್ನತೆಯ ಸುದ್ದಿಯೊಂದಿಗೆ 2023 ವರ್ಷ ಪ್ರಾರಂಭವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ರಾಜ್ಯ ಸರ್ಕಾರಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ ಅಥವಾ ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೇ, ಪಡಿತರವನ್ನು ಶೇಕಡ 50 ರಷ್ಟು ಹಠಾತ್ ಕಡಿತಗೊಳಿಸುವುದರೊಂದಿಗೆ ಪ್ರಧಾನ ಮಂತ್ರಿ ಪ್ರತಿಗಾಮಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಪಿಎಂಜಿಕೆಎವೈ ಅಡಿಯಲ್ಲಿ 28 ತಿಂಗಳುಗಳ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಕೇಂದ್ರವು ಕೈಗೆತ್ತಿಕೊಂಡಿತ್ತು. ಆದರೆ ಯೋಜನೆಯು ಡಿಸೆಂಬರ್‌ನಲ್ಲಿ ಕೊನೆಗೊಂಡಿತು. ಆದಾಗ್ಯೂ, NFSA ಅಡಿಯಲ್ಲಿ ಸುಮಾರು 81.35 ಕೋಟಿ ಫಲಾನುಭವಿಗಳಿಗೆ ವಿತರಿಸಲಾದ ಸಬ್ಸಿಡಿ ಆಹಾರ ಧಾನ್ಯಗಳನ್ನು 2023 ರಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಕ್ಯಾಬಿನೆಟ್ ನಿರ್ಧರಿಸಿದೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಆದ್ಯತಾ ಕುಟುಂಬದಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯ, ಅಂತ್ಯೋದಯ ಅನ್ನ ಯೋಜನೆ ಫಲಾನುಭವಿಗಳಿಗೆ ಪ್ರತಿ ಮನೆಗೆ 35 ಕೆಜಿ ಆಹಾರ ಧಾನ್ಯ ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ.
ಆದರೆ, ಮೋದಿ ಸರ್ಕಾರವು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉಚಿತ 5 ಕೆಜಿ ಧಾನ್ಯಗಳನ್ನು ಕಡಿತಗೊಳಿಸಿದೆ ಎಂದು ಜೈರಾಮ್ ರಮೇಶ್ ಮಂಗಳವಾರ ಆರೋಪಿಸಿದ್ದಾರೆ.