
ಮಂಗಳೂರು: ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ. ಮಂಗಳೂರಿನ ಆಡ್ಯಾರ್ ನಲ್ಲಿರುವ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಲೋಕಸಭೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಎಐಸಿಸಿ ಸೂಚನೆ ಮೇರೆಗೆ ರಾಜ್ಯಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಲ್ಲಾ ಸಚಿವರು, ಸಂಸದರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು, ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳು, ಎಲ್ಲಾ ಹಂತದ ಅಧ್ಯಕ್ಷರು ಕಾರ್ಯಕರ್ತರ ಸಮಾವೇಶದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.