
ತುಮಕೂರು: ಜಾತಿಗಣತಿ ವರದಿ ಜಾರಿಗೆ ಕಾಂಗ್ರೆಸ್ ಶಾಸಕರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಜಾತಿಗಣತಿ ವರದಿ ಅನುಷ್ಠಾನ ಬೇಡ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸ್, ಮೊದಲು ಜಾತಿಗಣತಿ ವರದಿ ಬಗ್ಗೆ ಎಲ್ಲರೊಂದಿಗೂ ಚರ್ಚೆ ನಡೆಸಲಿ. ಬಳಿಕ ಕ್ಯಾಬಿನೆಟ್ ಗೆ ತರಲಿ. ಮೇಲ್ನೋಟಕ್ಕೆ ಇದು ಅವೈಜ್ಞಾನಿಕ ಜಾತಿಗಣತಿಯಾಗಿದೆ ಎಂದು ಹೇಳಿದರು.
ಎಲ್ಲಾ ಸಮುದಾಯಕ್ಕೂ ಸಾಮಾಜಿಕ, ಶೈಕ್ಷಣಿಕ ನ್ಯಾಯ ಸಿಗಬೇಕು. ಆರೋತಿ ವರದಿಯನ್ನು ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ. ನಾನು ಈ ಹಿಂದೆಯೇ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಜಾತಿಗಣತಿ ವರದಿ ಜಾರಿ ಬಗ್ಗೆ ನನ್ನ ವಿರೋಧವಿದೆ ಎಂದು ತಿಳಿಸಿದ್ದಾರೆ.
ಒಕ್ಕಲಿಗ, ಲಿಂಗಾಯಿತ ಹೀಗೆ ಹಲವು ಜಾತಿಗಳಲ್ಲಿ ಒಳಪಂಗಡಗಳಿವೆ. ಅವುಗಳ ಬಗ್ಗೆಯೂ ಸರಿಯಾಗಿ ಬರೆದುಕೊಂಡು ಹೋಗಬೇಕು. ಆ ರೀತಿ ಮಾಡಿರುವ ಸಾಧ್ಯತೆ ಕಡಿಮೆ ಹಾಗಾಗಿ ಜಾತಿಗಣತಿ ವರದಿ ಅವೈಜ್ಞಾನಿಕವಾಗಿದೆ ಎಂದು ತಿಳಿಸಿದ್ದಾರೆ.