
ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಶನಿವಾರ ತನ್ನ ತಂಡವನ್ನು ಪ್ರಕಟಿಸಿದ್ದು, ಉತ್ತರ ಪ್ರದೇಶ ಉಸ್ತುವಾರಿ ಹುದ್ದೆಯಿಂದ ಬಿಡುಗಡೆಗೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕೆಲವು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ನಾಯಕರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.
ಪ್ರಿಯಾಂಕಾ ಈಗ ಯಾವುದೇ ಪೋರ್ಟ್ಫೋಲಿಯೊ ಇಲ್ಲದೆ ಸಾಂಸ್ಥಿಕ ಜವಾಬ್ದಾರಿಗಳನ್ನು ಮಾತ್ರ ನಿರ್ವಹಿಸುತ್ತಾರೆ. ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರಿಗೆ ಛತ್ತೀಸ್ ಗಢದ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ.
ಅವಿನಾಶ್ ಪಾಂಡೆ ಅವರಿಗೆ ಉತ್ತರ ಪ್ರದೇಶದ ಜವಾಬ್ದಾರಿ ನೀಡಲಾಗಿದೆ. ಅವರು ಈ ಹಿಂದೆ ಜಾರ್ಖಂಡ್‌ನ ಉಸ್ತುವಾರಿ ವಹಿಸಿದ್ದರು. ಬಿಹಾರದ ಉಸ್ತುವಾರಿ ಸ್ಥಾನದಿಂದ ಭಕ್ತ ಚರಣದಾಸ್ ಅವರನ್ನು ತೆಗೆದುಹಾಕಲಾಗಿದೆ. ಮೋಹನ್ ಪ್ರಕಾಶ್ ಅವರನ್ನು ಬಿಹಾರ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಕೆ.ಸಿ. ವೇಣುಗೋಪಾಲ್ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಉಳಿಯಲಿದ್ದಾರೆ. ಅಜಯ್ ಮಾಕನ್ ಅವರನ್ನು ಖಜಾಂಚಿಯನ್ನಾಗಿ ಮಾಡಲಾಗಿದೆ.
ಕೇರಳದ ಜವಾಬ್ದಾರಿಯನ್ನು ದೀಪಾ ದಾಸ್ಮುನ್ಶಿಗೆ ನೀಡಲಾಗಿದೆ. ಮಹಾರಾಷ್ಟ್ರದ ಎಐಸಿಸಿ ಉಸ್ತುವಾರಿಯಾಗಿ ರಮೇಶ್ ಚೆನ್ನಿತ್ತಲ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಮುಂದುವರೆಸಲಾಗಿದೆ.