ಬಳ್ಳಾರಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆ ರದ್ದು ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಪ್ರಜಾದ್ವನಿ 2 ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ಚೊಂಬು ಪಾರ್ಟಿಯಿಂದ ಜನರಿಗೆ ಖಾಲಿ ಚೊಂಬು ಹೊರತಾಗಿ ಬೇರೇನು ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಬರ ಪರಿಹಾರ ಕೇಳಿದಾಗ ಕೇಂದ್ರ ಸರ್ಕಾರ ಖಾಲಿ ಚೊಂಬು ಕೊಟ್ಟಿದೆ. ಕರ್ನಾಟಕದಿಂದ ತೆರಿಗೆ ರೂಪದಲ್ಲಿ 100 ರೂಪಾಯಿ ಕೊಟ್ಟರೆ 13 ರೂಪಾಯಿ ಮಾತ್ರ ವಾಪಸ್ ಬರುತ್ತಿದ್ದು, ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.
ಸಂವಿಧಾನ ನಾಶ ಮಾಡಲು ಬಿಜೆಪಿ ಹುನ್ನಾರ ನಡೆಸಿದೆ. ಆದರೆ, ಅಂತಹ ಶಕ್ತಿ ವಿಶ್ವದಲ್ಲಿಯೇ ಇಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ರೈತರ ಸಾಲ ಮನ್ನಾ ಮಾಡದ ಮೋದಿ ಶ್ರೀಮಂತರ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲಾಗುವುದು ಎಂದು ಹೇಳಿದ್ದಾರೆ.