ಬೆಳಗಾವಿ: ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ವಿಪಕ್ಷ ಕಾಂಗ್ರೆಸ್ ಬಸ್ ಯಾತ್ರೆ ಆರಭವಾಗಿದೆ. ಗಡಿ ಜಿಲ್ಲೆ ಬೆಳಗಾವಿಯ ವೀರಸೌಧದಿಂದ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಚಾಲನೆ ನಿಡಿದರು.
ಬೆಳಗಾವಿಯ ವೀರಸೌಧದ ಬಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ ನೀಡಲಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕದ ಬದಲಾವಣೆಗೆ ನಾಂದಿ ಹಾಡಿದ್ದೇವೆ. ಮಹಾತ್ಮ ಗಾಂಧೀಜಿಯವರು ಬ್ರಿಟಿಷ್‌ರನ್ನು ದೇಶದಿಂದ ತೊಲಗಿಸಲು ಇದೇ ಬೆಳಗಾವಿಯಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಹೋರಾಟ ನಡೆಸಿದ್ದರು. ಅದಾದ ಮೇಲೆ ಪ್ರಜಾಪ್ರಭುತ್ವ ಬಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಈಗ ನಾವು ರಾಜ್ಯದಲ್ಲಿ ಬದಲಾವಣೆ ತರಬೇಕಾದಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಿ ಜನಪರ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯಾತ್ರೆ ಆರಂಭಿಸಿದ್ದೇವೆ ಎಂದರು.
ಮೂರುವರೆ ವರ್ಷಗಳಿಂದ ಬಿಜೆಪಿ ಸರ್ಕಾರ ನಮ್ಮ ರಾಜ್ಯಕ್ಕೆ ದೊಡ್ಡ ಕಳಂಕ ತಂದಿದೆ. ಆ ಕಳಂಕ ನಿರ್ಮೂಲನೆ ಮಾಡಲು ಪ್ರಜೆಗಳ ಧ್ವನಿ ತಿಳಿಸಲು ಹೊರಟಿದ್ದೇವೆ. ಐತಿಹಾಸಿಕವಾದ ಈ ಭೂಮಿಯಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ. ಈ ತಿಂಗಳು ಜಿಲ್ಲಾ ಕೇಂದ್ರಗಳನ್ನ ಮುಗಿಸಿ ಬಳಿಕ ಕ್ಷೇತ್ರವಾರು ಸಂಚಾರ ಆರಂಭಿಸುತ್ತೇವೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸಂಚಾರ ಮಾಡ್ತೀವೇ ಎಂದು ಹೇಳಿದರು.