ಮುಂಬೈ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭೆ ಸದಸ್ಯ ಹಾಗೂ ರಾಹುಲ್ ಗಾಂಧಿಯವರ ನಿಕಟವರ್ತಿಯಾಗಿದ್ದ ರಾಜೀವ್ ಸಾತವ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
46 ವರ್ಷದ ರಾಜೀವ್ ಸಾತವ್ ಅವರಿಗೆ ಕಳೆದ ತಿಂಗಳು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದ್ದು 23 ದಿನಗಳ ಕಾಲ ಜೆಹಂಗೀರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆನ್ನಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಅವರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಅಯ್ಯರ್ ತಿಳಿಸಿದ್ದಾರೆ.
2014 ರಲ್ಲಿ ಮಹಾರಾಷ್ಟ್ರದ ಹಿಂಗೋಲಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಅವರು, 2019ರ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಕಾಂಗ್ರೆಸ್ ಪಕ್ಷ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಮಾಜಿ ಸಚಿವ ರಜನಿ ಸಾತವ್ ಅವರ ಪುತ್ರರಾಗಿದ್ದ ರಾಜೀವ್ ಸಾತವ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಗುಜರಾತ್ ನಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪುಣೆಯಲ್ಲಿ ಅವರು ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ.