ನವದೆಹಲಿ: ಭಾರತದಲ್ಲಿ ಕಂಡುಬಂದ ಕೋವಿಡ್-19 ಹೊಸ ತಳಿಗೆ ಮೋದಿ ವೈರಸ್ ಎಂದು ಕರೆಯುವ ಮೂಲಕ ಕಾಂಗ್ರೆಸ್ ದೇಶ ಮತ್ತು ಪ್ರಧಾನಿ ಮೋದಿ ಅವರ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ. ಈ ಮೂಲಕ ಕೊರೋನಾ ಸಾಂಕ್ರಾಮಿಕ ರೋಗ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೊಂದು ವಾಕ್ಸಮರ ಶುರುವಾಗಿದೆ.
ಭಾರತೀಯ ರೂಪಾಂತರ ವೈರಸ್ ಗೆ ಮೋದಿ ವೈರಸ್ ಅಥವಾ ಭಾರತದ ರೂಪಾಂತರ ತಳಿ ಎಂದು ಬಳಕೆ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ಕುಂಭಮೇಳ ವೈರಸ್ ನ ಸೂಪರ್ ಸ್ಪ್ರೆಡರ್ ಆಗಿದೆ ಎಂದು ಪ್ರಚಾರ ಮಾಡುವಂತೆ ಸೂಚಿಸಲಾಗಿದೆ. ಈ ಟೂಲ್ ಕಿಟ್ ಕುರಿತಾಗಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು ತಿರುಗೇಟು ನೀಡಿರುವ ಕಾಂಗ್ರೆಸ್ ಅಂತಹ ವರದಿ ಕಪೋಲಕಲ್ಪಿತ ಎಂದು ಟೀಕಿಸಿದೆ. ಇದೊಂದು ಸುಳ್ಳಿನ ಕಂತೆಯಾಗಿದೆ ಪೋಲಿಸ್ ಕೇಸ್ ದಾಖಲಿಸಲು ಕ್ರಮಕೈಗೊಳ್ಳುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ನಾಲ್ಕು ಪುಟಗಳ ಕಾಂಗ್ರೆಸ್ ಟೂಲ್ ಕಿಟ್ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇ ವಿಚಾರವಾಗಿ ಉಭಯ ಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.