ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಗಿದ್ದು, ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಕೆ ಅಬ್ದುಲ್ ಜಬ್ಬಾರ್, ನಾಗರಾಜ್ ಯಾದವ್ ಅವರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. ಎಸ್.ಆರ್. ಪಾಟೀಲ್ ಪರವಾಗಿ ಬ್ಯಾಟ್ ಬೀಸಿದ್ದ ಡಿ.ಕೆ. ಶಿವಕುಮಾರ್ ಗೆ ಹಿನ್ನಡೆಯಾಗಿದೆ.
ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಇಬ್ಬರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ಎರಡು ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದು, ತನ್ನ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲಂ ವೀರಭದ್ರಪ್ಪ, ವಿ.ಎಸ್. ಉಗ್ರಪ್ಪ, ಎಸ್.ಆರ್. ಪಾಟೀಲ್ ಸೇರಿದಂತೆ ಬಹಳಷ್ಟು ನಾಯಕರು ಆಕಾಂಕ್ಷಿಗಳಾಗಿದ್ದರೂ, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ನಾಗರಾಜ್ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಅವರಿಗೆ ಅವಕಾಶ ನೀಡಿದೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಅಚ್ಚರಿ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಅಬ್ದುಲ್ ಜಬ್ಬಾರ್ ಎರಡನೇ ಬಾರಿಗೆ ಮತ್ತು ನಾಗರಾಜ ಯಾದವ್ ಮೊದಲ ಬಾರಿಗೆ ವಿಧಾನಪರಿಷತ್ ಪ್ರವೇಶಿಸಲಿದ್ದಾರೆ.