ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕರ ಪುತ್ರ ಮತ್ತು ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪ್ರಮುಖ ಆರೋಪಿಯನ್ನು ಅಲ್ವಾರ್ ಜಿಲ್ಲೆಯ ರಾಜ್ ಗಢ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೋಹರಿ ಲಾಲ್ ಮೀನಾ ಅವರ ಪುತ್ರ ದೀಪಕ್ ಮೀನಾ ಎಂದು ಪೊಲೀಸರು ಗುರುತಿಸಿದ್ದಾರೆ.
ಐವರು ಆರೋಪಿಗಳಲ್ಲಿ ಒಬ್ಬನನ್ನು ವಿವೇಕ್ ಶರ್ಮಾ ಎಂದು ಗುರುತಿಸಲಾಗಿದ್ದು, ಸಾಮೂಹಿಕ ಅತ್ಯಾಚಾರದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡುವುದಾಗಿ ಸಂತ್ರಸ್ತೆಯನ್ನು ಬೆದರಿಸಿ 15 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಮಾಂದಾವರ್ ಪೊಲೀಸ್ ಠಾಣೆಯ ಎಸ್.ಹೆಚ್.ಒ. ನಾಥು ಲಾಲ್ ಹೇಳಿದ್ದಾರೆ.
ಅಪ್ರಾಪ್ತ ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದು, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಬಾಲಕಿಯನ್ನು ಮಹ್ವಾ-ಮಂದಾವರ್ ರಸ್ತೆಯಲ್ಲಿರುವ ಹೋಟೆಲ್ ಗೆ ಕರೆದೊಯ್ದು ಕೃತ್ಯವೆಸಗಿದ್ದಾರೆ. ಆಕೆಯನ್ನು ಬೆದರಿಸಲು ಅಶ್ಲೀಲ ವಿಡಿಯೋ ಕೂಡ ಮಾಡಿದ್ದಾರೆ. ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ, ಈ ವಿಷಯ ಬೆಳಕಿಗೆ ಬಂದಿದೆ. ಈ ವಿಚಾರದಲ್ಲಿ ಕುಟುಂಬಸ್ಥರು ಆರಂಭದಲ್ಲಿ ಕಳ್ಳತನದ ದೂರು ದಾಖಲಿಸಿದ್ದರು. ತನಿಖೆಯಲ್ಲಿ ಶರ್ಮಾ ಭಾಗಿಯಾಗಿರುವುದು ಕಂಡುಬಂದಿದೆ, ನಂತರ ಸಂತ್ರಸ್ತ ಬಾಲಕಿ ತನ್ನ ತಾಯಿಯೊಂದಿಗೆ ತನ್ನ ಕಷ್ಟ ಹಂಚಿಕೊಳ್ಳಲು ಧೈರ್ಯ ತೋರಿದ್ದಾಳೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.