ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಭರತ್ ಸಿಂಗ್ ಸುದ್ದಿಯಲ್ಲಿದ್ದಾರೆ. ಸಂಗೋಡಿನ ಕಾಂಗ್ರೆಸ್ ಶಾಸಕ ಭರತ್ ಸಿಂಗ್, ನೋಟಿನಲ್ಲಿರುವ ಗಾಂಧಿ ಫೋಟೋಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. 500 ಹಾಗೂ 2 ಸಾವಿರ ರೂಪಾಯಿ ನೋಟಿನಲ್ಲಿರುವ ಮಹಾತ್ಮ ಗಾಂಧಿ ಫೋಟೋವನ್ನು ತೆಗೆಯುವಂತೆ ಭರತ್ ಸಿಂಗ್, ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮಹಾತ್ಮ ಗಾಂಧಿ, ಸತ್ಯದ ಸಂಕೇತ. ಭಾರತೀಯ ರಿಸರ್ವ್ ಬ್ಯಾಂಕಿನ 500 ಮತ್ತು 2000 ನೋಟುಗಳಲ್ಲಿ ಮಹಾತ್ಮ ಗಾಂಧಿಯವರ ಫೋಟೋ ಇರುತ್ತದೆ. ಈ ನೋಟುಗಳನ್ನು ಲಂಚದ ವಹಿವಾಟಿಗೆ ಬಳಸಲಾಗುತ್ತದೆ. ಹಾಗಾಗಿ 500 ಮತ್ತು 2000 ನೋಟುಗಳಲ್ಲಿರುವ ಗಾಂಧೀಜಿಯವರ ಫೋಟೋ ತೆಗೆಯಬೇಕೆಂದು ಭರತ್ ಸಿಂಗ್ ಒತ್ತಾಯಿಸಿದ್ದಾರೆ. ಗಾಂಧಿ ಫೋಟೋ ಬದಲು ಕನ್ನಡಕ ಅಥವಾ ಅಶೋಕ್ ಚಕ್ರದ ಚಿತ್ರವನ್ನು ಮಾತ್ರ ಹಾಕಿ ಎಂದು ಪ್ರಧಾನಿಗೆ ಸಲಹೆ ನೀಡಿದ್ದಾರೆ.
75 ವರ್ಷಗಳಲ್ಲಿ, ದೇಶ ಮತ್ತು ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಈ ಭ್ರಷ್ಟಾಚಾರವನ್ನು ತಡೆಯಲು ಎಸಿಬಿ ಇಲಾಖೆ ತನ್ನ ಕೆಲಸವನ್ನು ರಾಜಸ್ಥಾನದಲ್ಲಿ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಎಸಿಬಿ ಇಲಾಖೆಯು ಲಂಚದ ಮೊತ್ತವನ್ನು 500 ಮತ್ತು 2000 ನೋಟುಗಳಲ್ಲಿ ಪಡೆಯುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರವಿರುವ ದೊಡ್ಡ 500 ಮತ್ತು 2000 ನೋಟುಗಳನ್ನು ಬಾರ್, ಲಿಕ್ಕರ್ ಪಾರ್ಟಿಗಳು ಮತ್ತು ಇತರ ಪಾರ್ಟಿಗಳಲ್ಲಿ ನೃತ್ಯ ಮಾಡುವವರ ಮೇಲೆ ಎಸೆಯಲಾಗುತ್ತದೆ. ಇದು ಮಹಾತ್ಮ ಗಾಂಧಿಗೆ ಅವಮಾನ ಮಾಡಿದಂತೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
5, 10, 20, 50, 100 ಮತ್ತು 200 ನೋಟುಗಳ ಮೇಲೆ ಮಾತ್ರ ಗಾಂಧಿ ಫೋಟೋ ಮುದ್ರಿಸಬೇಕೆಂದು ಭರತ್ ಸಿಂಗ್ ಪತ್ರದಲ್ಲಿ ಬರೆದಿದ್ದಾರೆ. ಈ ನೋಟುಗಳು ಬಡವರಿಗೆ ಉಪಯುಕ್ತವಾಗುತ್ತವೆ ಎಂದವರು ಹೇಳಿದ್ದಾರೆ.