ದಾವಣಗೆರೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿದ್ದ ಟೀಂ ಮತ್ತೆ ಕೆಲಸ ಮಾಡಲು ಆರಂಭಿಸಿದೆ. 50 ಕೋಟಿ ಆಮಿಷವೊಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಮೈತ್ರಿ ಸರ್ಕಾರ ಬೀಳಿಸಿದ್ದ ಟೀಂ ಬೆಳಿಗ್ಗೆ ಎದ್ದು ರೆಡಿಯಾಗಿ ಕಾಂಗ್ರೆಸ್ ಶಾಸಕರುಗಳ ಮನೆಗೆ ಹೋಗುತ್ತಾರೆ. ಅಮಿತ್ ಶಾ ಅವರನ್ನು ಮೀಟ್ ಮಾಡಿಸುತ್ತೇವೆ. ಸ್ಪೆಷಲ್ ಫ್ಲೈಟ್ ಬುಕ್ ಮಾಡುತ್ತೇವೆ. 50 ಕೋಟಿ ರೂಪಾಯಿ ಕೊಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಟೀಂ ನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪಿಎ ಆಗಿದ್ದ ಸಂತೋಷ್ ಕೂಡ ಇದ್ದಾರೆ. ಅವರು ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ ನಮ್ಮ ಶಾಸಕರನ್ನು ಭೇಟಿಯಾಗಿದ್ದಾರೆ. ಆದರೆ ನಮ್ಮ ಶಾಸಕರು ಅವರ ಆಮಿಷಕ್ಕೆ ಬಲಿಯಾಗಲ್ಲ. ಯಾರು ಓಡಾಡುತ್ತಿದ್ದಾರೆ ಅವರ ವಿಡಿಯೋ ಕೂಡ ಇದೆ. ಕೆಲವೇ ದಿನಗಳಲ್ಲಿ ಆ ವಿಡಿಯೋ ಬಿಡುಗಡೆ ಮಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.