ಭುವನೇಶ್ವರ್: ಒಡಿಶಾದ ಕಾಂಗ್ರೆಸ್ ಶಾಸಕ ಅಡ್ಡ ಮತದಾನ ಮಾಡಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರ ಬದಲಿಗೆ ಎನ್.ಡಿ.ಎ. ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ಹಾಕಿದ್ದಾರೆ.
ಕಾಂಗ್ರೆಸ್ ನಾಯಕತ್ವದ ಆದೇಶವನ್ನು ಧಿಕ್ಕರಿಸಿ ಪಕ್ಷದ ಶಾಸಕ ಅಡ್ಡ ಮತದಾನ ಮಾಡಿದ್ದಾರೆ. ನನ್ನ ಆತ್ಮಸಾಕ್ಷಿ ಆದೇಶದಂತೆ ಮತ ಚಲಾಯಿಸಿದ್ದೇನೆ. ಸಾಂವಿಧಾನಿಕ ಹುದ್ದೆಗೆ ಮಣ್ಣಿನ ಮಗಳನ್ನು ಆಯ್ಕೆ ಮಾಡಿದ್ದೇನೆ ಎಂದು ಒಡಿಶಾದ ಕಾಂಗ್ರೆಸ್ ಶಾಸಕ ಮಹಮ್ಮದ್ ಮೊಕ್ವಿಮ್ ಹೇಳಿದ್ದಾರೆ.
ಅವರ ಹೇಳಿಕೆಯಿಂದ ಒಡಿಶಾ ಕಾಂಗ್ರೆಸ್‌ನಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಯಶವಂತ್ ಸಿನ್ಹಾ ಅವರನ್ನು ಒಡಿಶಾ ಕಾಂಗ್ರೆಸ್ ಬೆಂಬಲಿಸಿತ್ತು. ಆದರೆ ಅವರು ದ್ರೌಪದಿ ಮುರ್ಮು ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ.
ಕಟಕ್-ಬಾರಾಬತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಹಮ್ಮದ್ ಮೊಕ್ವಿಮ್ ಅವರು, ಎನ್.ಡಿ.ಎ. ಅಭ್ಯರ್ಥಿ ದ್ರೌಪದಿ ಮುರ್ಮು ಒಡಿಶಾದ ಮಗಳು. ಅವರ ಪರವಾಗಿ ಮತ ಚಲಾಯಿಸಿರುವುದಾಗಿ ಘೋಷಿಸುವ ಮೂಲಕ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದ್ದಾರೆ.
ನಾನು ಒಡಿಯಾ; ನಾನು ದ್ರೌಪದಿ ಮುರ್ಮು ಒಡಿಶಾದ ಮಗಳಾಗಿರುವುದರಿಂದ ಅವರ ಪರವಾಗಿ ಮತ ಹಾಕಿದ್ದೇನೆ. ನಾನು ನನ್ನ ಆತ್ಮಸಾಕ್ಷಿಯಂತೆ ನಡೆದಿದ್ದೇನೆ. ಶಾಸಕರು ತಮ್ಮ ಆತ್ಮಸಾಕ್ಷಿಯನ್ನು ಕೇಳುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮೊಕ್ವಿಮ್ ಹೇಳಿದ್ದಾರೆ.