ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯಾಗಲಿದೆ ಎಂದು ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಹೇಳಿದ್ದಾರೆ.
ಬಿಡದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತಾಗಿ ಪಕ್ಷದ ವರಿಷ್ಠರು ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. ಪಕ್ಷದೊಳಗೆ ಯಾರು ಕೂಡ ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿಲ್ಲ ಎಂದು ಹೇಳಿದ್ದಾರೆ.
ಬೇರೆ ಪಕ್ಷಗಳ ರೀತಿ ಕಾಂಗ್ರೆಸ್ ಕುಟುಂಬದಲ್ಲಿ ಹಿಡಿತದಲ್ಲಿ ಇಲ್ಲ. ನಮ್ಮಲ್ಲಿ ಇರುವ ಅನೇಕರಿಗೆ ಮುಖ್ಯಮಂತ್ರಿಯಾಗುವಂತಹ ಅರ್ಹತೆ ಇದೆ. ಚುನಾವಣೆಯಲ್ಲಿ ಏಳೆಂಟು ಸಲ ಗೆದ್ದಿರುವ ಅನೇಕ ಹಿರಿಯ ನಾಯಕರಿದ್ದಾರೆ. ಇಂತಹ ಸಂದರ್ಭದಲ್ಲಿ ನಾಯಕತ್ವಕ್ಕೆ ಪೈಪೋಟಿ ಸಹಜವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಬಲಿಷ್ಠವಾಗಿದ್ದು ಎಲ್ಲವನ್ನು ಸರಿಪಡಿಸಲಿದೆ ಎಂದು ಹೇಳಿದ್ದಾರೆ.
ಡಿನ್ನರ್ ಪಾರ್ಟಿ ಮಾಡುವುದು ತಪ್ಪಲ್ಲ, ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪಕ್ಷ ನಮ್ಮದಲ್ಲ ಎಂದು ಹೇಳಿದ ಬಾಲಕೃಷ್ಣ, ಪಕ್ಷಕ್ಕೆ ಮುಜುಗರವಾಗುವ ರೀತಿ ಹೇಳಿಕೆ ನೀಡಿದಂತೆ ಹೈಕಮಾಂಡ್ ಸೂಚನೆ ನೀಡಿದೆ. ಕೆಲವು ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳಲ್ಲಿ ಇಂತಹ ಬೆಳವಣಿಗೆ ಸಾಮಾನ್ಯ ಎಂದು ಹೇಳಿದ್ದಾರೆ.