ಕಾರವಾರ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಲಾಭಿ ಜೋರಾಗಿದ್ದು, ಈ ನಡುವೆ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್, ಸಂಸದರ ವಿರುದ್ಧ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಶಾಸಕ ಭೀಮಣ್ನ ನಾಯ್ಕ್ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಅನಂತ ಕುಮಾರ ಹೆಗಡೆಗಿಲ್ಲ. ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿ ಮಾಡಿ ನುಡಿದಂತೆ ನಡೆಯುತ್ತಿದೆ. ಅದನ್ನು ಎದುರಿಸಲು, ಸಹಿಸಲು ಸಾಧ್ಯವಾಗದೇ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದರು ಮಾತನಾಡುತ್ತಿದ್ದಾರೆ. ಇಷ್ಟಕ್ಕೂ ಕ್ಷೇತ್ರಕ್ಕಾಗಿ ಅನಂತಕುಮರ್ ಹೆಗಡೆ ನೀಡಿರುವ ಕೊಡುಗೆಯೇನು? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರಿಗೆ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದುತ್ವದ ಬಗ್ಗೆ ಎಲ್ಲಿಲ್ಲದ ಅಭಿಮಾನ ಬರುತ್ತೆ. ಯಾಕೆ ನಾವು ಹಿಂದೂಗಳಲ್ವಾ? ಹಿಂದೂ ಧರ್ಮದ ಬಗ್ಗೆ ನಮಗೆ ಅಭಿಮಾನ, ಕಾಳಜಿ ಇಲ್ವಾ? ಈ ದೇಶದ ಪ್ರತಿಯೊಬ್ಬನೂ ಹಿಂದೂ ಧರ್ಮ ಕಾಪಾಡುವ ಕೆಲಸ ಮಾಡುತ್ತಾನೆ. ಸಂಸದ ಅನಂತ ಕುಮಾರ್ ಹೆಗಡೆ ಕ್ಷೇತ್ರದ ಜನರಿಗಾಗಿ ಏನು ಅಭಿವೃದ್ಧಿಮಾಡಿದ್ದಾರೆ? ಯಾವ ಕೆಲಸ ಮಾಡಿದ್ದಾರೆ? ಎಂದು ಕೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ. ನನಗೆ ಪಕ್ಷ ಸೂಚಿಸಿದರೆ ನಾನು ಸ್ಪರ್ಧೆಗೆ ಸಿದ್ಧ. ಇಂದೇ ಶಾಸಕ ಸ್ಥಾನ ಬಿಟ್ಟು ಲೋಕಸಭೆಗೆ ಸ್ಪರ್ಧಿಸು ಎಂದು ಸೂಚಿಸಿದರೆ ಸ್ಪರ್ಧೆಗೆ ಸಿದ್ಧ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದರು.