ಮಂಗಳವಾರ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಆಯೋಜಿಸಿದ್ದ ಮ್ಯಾರಥಾನ್ ವೇಳೆ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಾಂಗ್ರೆಸ್ ಚುನಾವಣಾ ಪ್ರಚಾರದ ಅಂಗವಾಗಿ ಮ್ಯಾರಥಾನ್ ಆಯೋಜಿಸಲಾಗಿತ್ತು. ನೂರಾರು ಮಹಿಳೆಯರು ಮತ್ತು ಮಕ್ಕಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.
ಅವರು ಓಟವನ್ನು ಪ್ರಾರಂಭಿಸುತ್ತಿದ್ದಂತೆ, ಜನದಟ್ಟಣೆ ಕಾರಣ ಕೆಲವು ಮಕ್ಕಳು ಮುಗ್ಗರಿಸಿ ನೆಲಕ್ಕೆ ಬಿದ್ದರು. ಈ ವೇಳೆ ಗುಂಪು ಮುಂದಕ್ಕೆ ತಳ್ಳುತ್ತಿದ್ದಂತೆ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯ್ತು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಮ್ಯಾರಥಾನ್ ಅನ್ನು ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಬರೇಲಿ ಮೇಯರ್ ಸುಪ್ರಿಯಾ ಅರೋನ್ ಆಯೋಜಿಸಿದ್ದರು. ಘಟನೆಗೆ ಪ್ರತಿಕ್ರಿಯಿಸಿದ ಸುಪ್ರಿಯಾ, ವೈಷ್ಣೋ ದೇವಿಯ ದೇವಸ್ಥಾನದಲ್ಲೆ ಕಾಲ್ತುಳಿತ ಸಂಭವಿಸುತ್ತದೆ, ನಾವು ಮನುಷ್ಯರು. ನಮ್ಮ ಕಾರ್ಯಕ್ರಮದಲ್ಲಿ ಈ ಘಟನೆಯಾಗಿರುವುದು ಮಾನವ ಸಹಜ, ಇದನ್ನ ಹೈಲೈಟ್ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಜೊತೆಗೆ ಕಾರ್ಯಕ್ರಮದಲ್ಲಾದ ಸಮಸ್ಯೆಗೆ ಕ್ಷಮೆಯಾಚಿಸಿರುವ ಸುಪ್ರಿಯಾ, ಈ ಘಟನೆ ಕಾಂಗ್ರೆಸ್ ವಿರುದ್ಧ ವಿರೋಧ ಪಕ್ಷಗಳು ನಡೆಸಿರುವ ಪಿತೂರಿಯು ಆಗಿರಬಹುದು ಎಂದಿದ್ದಾರೆ.
ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ “ಲಡ್ಕಿ ಹೂ, ಲಡ್ ಸಕ್ತಿ ಹೂ”, ಅಭಿಯಾನವನ್ನು ಆರಂಭಿಸಿತ್ತು. ಈ ಅಭಿಯಾನದ ಅಂಗವಾಗಿ ಇಂದು ನಡೆದ ಮ್ಯಾರಥಾನ್ ಆಯೋಜಿಸಲಾಗಿತ್ತು.