ಬೆಂಗಳೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ವಿರುದ್ಧ ಪೋಸ್ಟ್ ಮಾಡಿದ್ದಕ್ಕೆ ಓರ್ವ ಆರೋಪಿಯನ್ನು ಗೋವಾದಲ್ಲಿ ಬಂಧಿಸಲಾಗಿದೆ.
ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಸುಳ್ಳು ಹೇಳಿಕೆ ನೀಡಿದ ಆರೋಪದಲ್ಲಿ ಭಿಕುಮಾತ್ರೆ ಎಂಬಾತನನ್ನು ಬೆಂಗಳೂರು ಸೈಬರ್ ಕ್ರೈಂ ಪೊಲಿಸರು ಗೋವಾದಲ್ಲಿ ಬಂಧಿಸಿದ್ದಾರೆ.
ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕಲು ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಿ ಪೋಸ್ಟ್ ಮಾಡಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಎಂಬುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ, ಇದು ಎಸ್ ಸಿಇ/ ಎಸ್ ಟಿಗಳನ್ನು ಒಳಗೊಂಡಿದೆ ಎಂದು ವಾದಿಸುತ್ತಿರುವವರ ಮುಖಕ್ಕೆ ಇದನ್ನು ಎಸೆಯಿರಿ ಎಂದು ವಿಡಿಯೋ ಹಂಚಿದ್ದಲ್ಲದೇ ಕಾಂಗ್ರೆಸ್ ಹಿಂದೂಗಳ ಸಂಪತ್ತನ್ನು ಕಸಿದುಕೊಳ್ಳಲು ಬಯಸುತ್ತಿದೆ ಎಂದು ಟ್ವೀಟ್ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಜೆ.ಸರವಣನ್ ಸೈಬರ್ ಕ್ರೈಂಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಟ್ವೀಟ್ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಗೋವಾದಲ್ಲಿ ವ್ಯಕ್ತಿಯನ್ನು ಬಂಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.