ನವದೆಹಲಿ: ಕಾಂಗ್ರೆಸ್ ಸಂಸದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಕೊರೊನಾ ಸೋಂಕು ಎದುರಿಸಲು ಸಲಹೆ ನೀಡಿದ್ದಾರೆ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಆಸ್ತಿ, ಆಭರಣ ಮಾರುವ ಪರಿಸ್ಥಿತಿ ಬಂದಿದೆ. ಪ್ರೀತಿಪಾತ್ರರಿಗೆ ಚಿಕಿತ್ಸೆ ಕೊಡಿಸಲು ಉಳಿತಾಯ ಮಾಡಿದ ಹಣವನ್ನೆಲ್ಲ ಖರ್ಚು ಮಾಡುವಂತಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಎಲ್ಲರಿಗೂ ಸುಲಭವಾಗಿ ಚಿಕಿತ್ಸೆ ದೊರಕಿಸಿಕೊಡಬೇಕು ಎಂದು ಹೇಳಿದ್ದಾರೆ.
ಅಸಾಧಾರಣ ರಾಷ್ಟ್ರೀಯ ಯುದ್ಧದಂತಹ ಪರಿಸ್ಥಿತಿಯಲ್ಲಿ ನಾಗರಿಕ ಸಮಾಜ ಹೋರಾಟ ನಡೆಸುತ್ತಿದ್ದು, ಕೇಂದ್ರ ಸರ್ಕಾರ ತನ್ನ ಕರ್ತವ್ಯವನ್ನು ಮರೆತಂತಿದೆ ಎಂದು ಆರೋಪಿಸಿದ್ದಾರೆ. ಸಾಮೂಹಿಕ ಮತ್ತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು. ಸಮಗ್ರ ನೀಲನಕ್ಷೆಯನ್ನು ರೂಪಿಸಿ ಕೊರೋನಾ ಸಾಂಕ್ರಮಿಕ ರೋಗ ನಿಭಾಯಿಸಲು ಕ್ರಮಕೈಗೊಳ್ಳಬೇಕು. ಎಲ್ಲಾ ಭಾರತೀಯರಿಗೆ ಲಸಿಕೆ ವ್ಯವಸ್ಥೆ ಮಾಡಬೇಕು. ಲಸಿಕೆಗಾಗಿ ನಿಗದಿಪಡಿಸಿದ 35 ಸಾವಿರ ಕೋಟಿ ರೂಪಾಯಿ ಬಳಸಿಕೊಳ್ಳಲು ಸರ್ವಪಕ್ಷ ಸಭೆ ಕರೆಯಬೇಕೆಂದು ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವ ಜೊತೆಗೆ ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈಗ ಲಸಿಕೆಗಳಿಗೆ ಶೇಕಡ 5 ರಷ್ಟು, ಪಿಪಿಇ ಕಿಟ್ ಗಳಿಗೆ ಶೇಕಡ 5 -12 ರಷ್ಟು, ಅಂಬುಲೆನ್ಸ್ ಗಳಿಗೆ ಶೇಕಡ 28, ಆಮ್ಲಜನಕ ಸಾಂದ್ರಕಗಳಿಗೆ ಶೇಕಡ 12 ರಷ್ಟು ತೆರಿಗೆ ಇದೆ. ಇದನ್ನು ಮನ್ನಾ ಮಾಡಬೇಕೆಂದು ಹೇಳಲಾಗಿದೆ.
ನಿರುದ್ಯೋಗಿ ವಲಸಿಗರಿಗೆ ನೆರವಾಗಲು ಪರಿಹಾರ ಸಾಮಗ್ರಿ ವಿತರಣೆ ಹೆಚ್ಚಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕನಿಷ್ಠ ವೇತನ ಹೆಚ್ಚಿಸಬೇಕು ಮತ್ತು ಕೆಲಸದ ದಿನವನ್ನು 100 -200 ದಿನಗಳಿಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ.