ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಮೂವರು ಸೂಚಕರು ತಮ್ಮ ಸಹಿ ನಕಲಿ ಎಂದು ಹೇಳಿದ್ದರಿಂದ ಅವರ ನಾಮಪತ್ರ ತಿರಸ್ಕರಿಸಲಾಗಿದೆ.
ಸೂರತ್ ನಿಂದ ಕಾಂಗ್ರೆಸ್‌ನ ಪರ್ಯಾಯ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮನಿರ್ದೇಶನ ನಮೂನೆಯನ್ನು ಸಹ ಅಮಾನ್ಯಗೊಳಿಸಲಾಯಿತು. ಇದರೊಂದಿಗೆ ಚುನಾವಣಾ ಸ್ಪರ್ಧೆಯಿಂದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಹೊರಬಿದ್ದಂತಾಗಿದೆ.
ಕುಂಭಾನಿ ಮತ್ತು ಪಡಸಾಲ ಅವರು ಸಲ್ಲಿಸಿದ ಮೂರು ನಾಮನಿರ್ದೇಶನ ನಮೂನೆಗಳನ್ನು ಪ್ರಸ್ತಾಪಿಸಿದವರ ಸಹಿಗಳಲ್ಲಿ ಮೊದಲ ನೋಟದಲ್ಲೇ ವ್ಯತ್ಯಾಸ ಕಂಡುಬಂದ ನಂತರ ಮತ್ತು ಅವು ನಿಜವಾದ ಸಹಿಗಳೆಂದು ಕಾಣಿಸದ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿದೆ. ಅಫಿಡವಿಟ್‌ಗಳ ಮೂಲಕ ಪ್ರಸ್ತಾವನೆ ಸಲ್ಲಿಸಿದವರು ನಮೂನೆಗಳಿಗೆ ಸಹಿ ಮಾಡಿರುವುದನ್ನು ನಿರಾಕರಿಸಿದ್ದಾರೆ ಎಂದು ಚುನಾವಣಾಧಿಕಾರಿ(ಆರ್‌ಒ) ಸೌರಭ್ ಪಾರ್ಧಿ ತಿಳಿಸಿದ್ದಾರೆ.
ಚುನಾವಣಾ ನಾಮನಿರ್ದೇಶನ ನಿಯಮಾವಳಿಗಳ ಪ್ರಕಾರ, ಅಭ್ಯರ್ಥಿಯು ಮಾನ್ಯತೆ ಪಡೆದ ರಾಜಕೀಯ ಪಕ್ಷದ ನಾಮನಿರ್ದೇಶಿತರಾಗಿ ಸ್ಪರ್ಧಿಸಿದರೆ, ಕ್ಷೇತ್ರದ ಒಬ್ಬ ಮತದಾರರು ತಮ್ಮ ಉಮೇದುವಾರಿಕೆಯನ್ನು ಪ್ರಸ್ತಾಪಿಸಬೇಕಾಗುತ್ತದೆ. ಸ್ವತಂತ್ರ ಅಭ್ಯರ್ಥಿಯಾಗಿ ಅಥವಾ ನೋಂದಾಯಿತ ಆದರೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ ನಾಮನಿರ್ದೇಶನಗೊಂಡ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರೆ, ಕ್ಷೇತ್ರದ ಹತ್ತು ಮತದಾರರು ನಾಮಪತ್ರಕ್ಕೆ ಪ್ರತಿಪಾದಕರಾಗಿ ಸಹಿ ಮಾಡಬೇಕು.
ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ: ಕಾಂಗ್ರೆಸ್
ಇದನ್ನು ದೃಢಪಡಿಸಿದ ಕಾಂಗ್ರೆಸ್‌ನ ಕಾನೂನು ಪ್ರತಿನಿಧಿ ಬಾಬು ಮಂಗುಕಿಯಾ ಅವರು, ನಾಲ್ವರು ಪ್ರತಿಪಾದಕರು ನಮೂನೆಗಳ ಮೇಲಿನ ಸಹಿಗಳು ತಮ್ಮದಲ್ಲ ಎಂದು ಹೇಳಿದ ನಂತರ ದಿನೇಶ್ ಕುಂಭಾಣಿ ಮತ್ತು ಸುರೇಶ್ ಪಡಸಾಲ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋಗುವ ಮೂಲಕ ಕಾನೂನಿನ ಹೋರಾಟ ನಡೆಸಲಾಗುವುದು ಎಂದು ಹೇಳಿದರು.