ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಕುರಿತಾಗಿ ನವದೆಹಲಿಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಫೈನಲ್ ಮೀಟಿಂಗ್ ನಡೆಯಲಿದೆ.
ಸಿಎಂ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿರುವ ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಂದು ನವದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆನ ಭೇಟಿಯ ಸಂದರ್ಭದಲ್ಲಿ ಉಭಯ ನಾಯಕರು ತಮಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕಿರುವ ಬಗ್ಗೆ ಕಾರಣಗಳನ್ನು ತಿಳಿಸಿದ್ದಾರೆ. ಪ್ರತ್ಯೇಕವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ ಉಭಯ ನಾಯಕರು ಅಧಿಕಾರ ಹಂಚಿಕೆ ಸೂತ್ರಕ್ಕೆ ಒಪ್ಪಿಕೊಂಡಿಲ್ಲ. ಉಭಯ ನಾಯಕರು ತಮ್ಮ ನಿಲುವಿಗೆ ಪಟ್ಟು ಹಿಡಿದಿರುವುದರಿಂದ ಹೊಸ ಮುಖ್ಯಮಂತ್ರಿ ಘೋಷಣೆಗೆ ಕಾಂಗ್ರೆಸ್ ಮತ್ತೊಂದು ಸುತ್ತಿನ ಚರ್ಚೆ ನಡೆಸುವ ಸಾಧ್ಯತೆ ಇದೆ.
ಬುಧವಾರ ಬೆಳಗ್ಗೆ 11 ಗಂಟೆಗೆ ದೆಹಲಿಯಲ್ಲಿ ಸಿಎಂ ಆಯ್ಕೆ ಕುರಿತಾಗಿ ಅಂತಿಮ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ಸಭೆಯಲ್ಲಿ ಪಕ್ಷದ ಉನ್ನತ ನಾಯಕರು ಭಾಗವಹಿಸಲಿದ್ದಾರೆ. ಇಲ್ಲವಾದರೆ ಸಿಎಂ ನಿರ್ಧಾರಕ್ಕಾಗಿ ಕಾಯುವ ಸಾಧ್ಯತೆ ಇದೆ ಎನ್ನಲಾಗಿದೆ.