ಆಜಾದಿಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶುಭ ಕೋರಲು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ ವೆಬ್ಸೈಟ್ನಲ್ಲಿರುವ ಫೋಟೋ ಇದೀಗ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗಿಸಿದೆ.
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರುವಲ್ಲಿ ನೆಹರೂ ಫೋಟೋ ಬಳಸದ ಐಸಿಹೆಚ್ಆರ್ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕ್ತಿದ್ದಾರೆ.
ಕಾಂಗ್ರೆಸ್ ನಾಯಕರು ಐಸಿಹೆಚ್ಆರ್ ವೆಬ್ಸೈಟ್ನಲ್ಲಿ ಅಮೃತ ಮಹೋತ್ಸವಕ್ಕೆ ಶುಭ ಕೋರಲು ಬಳಸಿದ್ದ ಫೋಟೋದ ಸ್ಕ್ರೀನ್ ಶಾಟ್ನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಮಹಾತ್ಮಾ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಡಾ. ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜೇಂದ್ರ ಪ್ರಸಾದ್, ಮದನ್ ಮೋಹನ್ ಮಾಲ್ವಿಯಾ ಹಾಗೂ ವೀರ್ ಸಾವರ್ಕರ್ ಫೋಟೋವನ್ನು ಹಾಕಲಾಗಿದೆ. ಆದರೆ ಜವಾಹರಲಾಲ್ ನೆಹರೂ ಫೋಟೋ ಮಾತ್ರ ಕಾಣುತ್ತಿಲ್ಲ.
ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಐಸಿಹೆಚ್ಆರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಐಸಿಹೆಚ್ಆರ್ನ ಈ ನಡೆಯನ್ನು ಕ್ರೂರ ಎಂದು ಜರಿದಿದ್ದಾರೆ. ಪಕ್ಷದ ವಕ್ತಾರ ಗೌರವ್ ಗೊಗೊಯ್ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಯಾವುದೇ ದೇಶವು ಮೊದಲ ಪ್ರಧಾನಿಯ ಫೋಟೋವನ್ನು ವೆಬ್ಸೈಟ್ನಿಂದ ತೆಗೆದುಹಾಕೋದಿಲ್ಲ. ಇದೊಂದು ಅನ್ಯಾಯವಾಗಿದೆ ಎಂದಿದ್ದಾರೆ.
ಸಂಸದ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಐಸಿಹೆಚ್ಆರ್ ನೆಹರೂ ಫೊಟೋವನ್ನು ತೆಗೆದು ಹಾಕುವ ಮೂಲಕ ನಾಚಿಕೆಗೇಡಿನ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.