ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ಉಂಟಾಗಿದೆ, ಹಿರಿಯ ನಾಯಕರಿಬ್ಬರು ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ.
ಕೇರಳ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿ.ಎಂ. ಸುಧೀರನ್ ಎಐಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ತೊರೆಯುವ ಬಗ್ಗೆ ಮಾತನಾಡಿದ್ದಾರೆ. ಎರಡು ದಿನಗಳ ಹಿಂದೆ ಕೇರಳ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು ಎಐಸಿಸಿ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರ ಬೇಡಿಕೆಗೆ ಕಮಾಂಡ್ ಸ್ಪಂದಿಸದ ಹಿನ್ನೆಲೆಯಲ್ಲಿ ಪಕ್ಷ ತೊರೆಯಲು ಮುಂದಾಗಿದ್ದಾರೆ.
ಗೋವಾ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ನಾಯಕ ಲುಝಿನ್ಹೊಫೆಲಿರೋ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಪಂಜಾಬ್ ನಲ್ಲಿ ಆಂತರಿಕ ಕಲಹ ತಣಿಸಲು ನವಜೋತ್ ಸಿಂಗ್ ಸಿಧು ಬೇಡಿಕೆಯಂತೆ ಅಮರೀಂದರ್ ಸಿಂಗ್ ಅವರನ್ನು ಕೆಳಗಿಳಿಸಿ ಸಿದ್ದು ಆಪ್ತ ಚರಣ್ ಸಿಂಗ್ ಚನ್ನಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಆದರೆ, ಚರಣ್ ಸಿಂಗ್ ಮತ್ತು ಸಿಧು ನಡುವೆಯೂ ಸಂಪುಟ ವಿಸ್ತರಣೆ ಬಳಿಕ ಮುನಿಸು ಉಂಟಾಗಿದ್ದು, ಕಾಂಗ್ರೆಸ್ ನಾಯಕರಿಗೆ ಹೊಸ ತಲೆನೋವು ತಂದಿದೆ ಎಂದು ಹೇಳಲಾಗಿದೆ.