ಬಾಲಿವುಡ್ ನಟ ಮತ್ತು ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅವರ ವಿರುದ್ಧ 1996 ರಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ವಿಧಿಸಲಾಗಿದೆ.
ನಟನಾಗಿದ್ದ ಬಬ್ಬರ್ ಜನತಾದಳ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೂಲಕ ರಾಜಕಾರಣದಲ್ಲಿ ಕೈಯಾಡಿಸಿದ್ದರು. ಲಕ್ನೋದ ಸಂಸದರೂ ಆದರು. ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಅವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ 8500 ರೂ. ದಂಡವನ್ನೂ ವಿಧಿಸಲಾಗಿದೆ.
ಸರ್ಕಾರಿ ಕರ್ತವ್ಯಗಳಲ್ಲಿ ಹಸ್ತಕ್ಷೇಪ ಮತ್ತು ದೈಹಿಕ ಹಲ್ಲೆ ನಡೆಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕನನ್ನು ತಪ್ಪಿತಸ್ಥರೆಂದು ಗುರುತಿಸಲಾಗಿದೆ. 1996ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಬ್ಬರ್ ಸರ್ಕಾರಿ ಅಧಿಕಾರಿ ವಿರುದ್ಧ ಒರಟಾಗಿ ನಡೆದುಕೊಂಡರೆಂಬ ಆರೋಪ ಸಾಬೀತಾಗಿ, ತಪ್ಪಿತಸ್ಥರೆಂದು ಕೋರ್ಟ್ ನಿರ್ಧರಿಸಿದೆ. ಈ ಘಟನೆ ನಡೆದಾಗ ಅವರು ಸಮಾಜವಾದಿ ಪಕ್ಷದಿಂದ ಲಕ್ನೋದಿಂದ ಚುನಾವಣೆಗೆ ಸ್ಪಧಿರ್ಸಿದ್ದರು.
1996ರ ಮೇ 2ರಂದು ಈ ಘಟನೆ ನಡೆದಿತ್ತು. ಉತ್ತರ ಪ್ರದೇಶದ ವಜೀರ್ಗಂಜ್ ಪೊಲೀಸ್ ಠಾಣೆಯಲ್ಲಿ ಚುನಾವಣಾಧಿಕಾರಿ ಕೃಷ್ಣ ಸಿಂಗ್ ರಾಣಾ ದೂರು ದಾಖಲಿಸಿದ್ದರು. ರಾಣಾ ಅವರು ನೀಡಿದ ದೂರಿನ ಪ್ರಕಾರ, ಬಬ್ಬರ್ ಮತ್ತು ಅವರ ಕೆಲವು ಬೆಂಬಲಿಗರು ಲೋಕಸಭಾ ಚುನಾವಣೆಯ ಸಮಯದಲ್ಲಿ ಮತಗಟ್ಟೆಗೆ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿದ್ದರು. ಪೋಲಿಂಗ್ ಏಜೆಂಟ್ ಗಂಟಲು ಮತ್ತು ಮೂಗು ಗಾಯಗಳಿಂದ ಬಳಲಿದ್ದರು. ತುಟಿಗೂ ಹಾನಿಯಾಗಿತ್ತು.
ರಾಜ್ ಬಬ್ಬರ್ ಪ್ರಸಿದ್ಧ ಬಾಲಿವುಡ್ ನಟರಾಗಿದ್ದು, ದಲಾಲ್, ದಿ ಗ್ಯಾಂಬ್ಲರ್, ಅಂದಾಜ್, ಆಂಖೇನ್ ಮತ್ತು ಜಿದ್ದಿ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.