ಛತ್ತೀಸ್‌ಗಢದ ಜಾಂಜ್‌ಗಿರ್-ಚಂಪಾ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಪಂಚರಾಮ್ ಯಾದವ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರದಂದು ಕುಟುಂಬವು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶನಿವಾರ ರಾತ್ರಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಪದಾಧಿಕಾರಿ ಪಂಚರಾಮ್ ಯಾದವ್(66), ಅವರ ಪತ್ನಿ ದಿನೇಶ್ ನಂದಿನಿ(55) ಮತ್ತು ಅವರ ಮಕ್ಕಳಾದ ಸೂರಜ್(27) ಮತ್ತು ನೀರಜ್ (32) ಅವರೊಂದಿಗೆ ವಿಷ ಸೇವಿಸಿದ್ದಾರೆ. ಅವರು ಬೋಧ ತಲಾಬ್ ಪ್ರದೇಶದ ನಿವಾಸಿಗಳು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾಂಜ್ಗೀರ್-ಚಂಪಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಜೈಸ್ವಾಲ್, ಆಗಸ್ಟ್ 30 ರಂದು ಕುಟುಂಬವು ವಿಷ ಸೇವಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿತ್ತು, ಅಲ್ಲಿಂದ ನೀರಜ್ ಅವರನ್ನು ಬಿಲಾಸ್ಪುರದ ಛತ್ತೀಸ್‌ಗಢ ವೈದ್ಯಕೀಯ ವಿಜ್ಞಾನ ಸಂಸ್ಥೆ(ಸಿಐಎಂಎಸ್) ಗೆ ಸ್ಥಳಾಂತರಿಸಲಾಯಿತು ಮತ್ತು ಇತರ ಮೂವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
‘ಕುಟುಂಬ ಸಾಲದ ಸುಳಿಯಲ್ಲಿತ್ತು’
ಯಾವುದೇ ಡೆತ್ ನೋಟ್ ಪತ್ರ ಪತ್ತೆಯಾಗಿಲ್ಲ. ಆತ್ಮಹತ್ಯೆ ಹಿಂದಿನ ಕಾರಣ ಅಸ್ಪಷ್ಟವಾಗಿಯೇ ಉಳಿದಿದೆ. ವಿಷ ಸೇವಿಸುವ ಮುನ್ನ ಕುಟುಂಬದವರು ಮನೆಯ ಮುಂಭಾಗದ ಗೇಟ್‌ಗೆ ಹೊರಗಿನಿಂದ ಬೀಗ ಹಾಕಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಸಹಜ ಪರಿಸ್ಥಿತಿಯನ್ನು ಗಮನಿಸಿದ ನೆರೆಹೊರೆಯವರು ಇತರರನ್ನು ಎಚ್ಚರಿಸಿದರು. ಅವರು ಮನೆಗೆ ನುಗ್ಗಿದ್ದು, ಅಲ್ಲಿ ಕುಟುಂಬದವರು ಗಂಭೀರ ಸ್ಥಿತಿಯಲ್ಲಿದ್ದನ್ನು ಗಮನಿಸಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ಸ್ಥಳೀಯರ ಪ್ರಕಾರ, ಯಾದವ್ ಕುಟುಂಬ ಸಾಲದ ಸುಳಿಯಲ್ಲಿತ್ತು. ಪಂಚರಾಮ್ ಸಿವಿಲ್ ಕಾಮಗಾರಿಗೆ ಗುತ್ತಿಗೆದಾರರಾಗಿದ್ದರೆ, ಅವರ ಪುತ್ರರು ಫ್ಯಾಬ್ರಿಕೇಶನ್ ವ್ಯವಹಾರವನ್ನು ಪ್ರಾರಂಭಿಸಿದ್ದರು, ಆದರೆ ಭಾರಿ ನಷ್ಟವನ್ನು ಅನುಭವಿಸಿದ್ದರು ಎನ್ನಲಾಗಿದೆ.