ಬೆಂಗಳೂರು: ಒಳ ಮೀಸಲಾತಿ ಜಾರಿಯಾಗುವವರೆಗೆ ಸರ್ಕಾರ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸಬಾರದು ಎಂದು ಕಾಂಗ್ರೆಸ್ ಮುಖಂಡ ಎಲ್. ಹನುಮಂತಯ್ಯ ಆಗ್ರಹಿಸಿದ್ದಾರೆ.
‘ಮೂಲ ಮಾದಿಗ ಮೂವ್ ಮೆಂಟ್ ಎಂ3’ ಕರ್ನಾಟಕ ವತಿಯಿಂದ ಬೆಂಗಳೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಒಳ ಮೀಸಲಾತಿ @30- ಮುಂದಿನ ಸವಾಲುಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಒಳ ಮೀಸಲಾತಿ ಜಾರಿಗೆ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಇದು ಜಾರಿಯಾಗುವವರೆಗೆ ಸರ್ಕಾರ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸಬಾರದು ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಒಪ್ಪಿಗೆ ಪಡೆದು ಒಳ ಮೀಸಲಾತಿ ಜಾರಿ ಮಾಡಲಿದ್ದಾರೆ. ಜಾರಿ ಮಾಡದಿದ್ದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. 30 ವರ್ಷಗಳಿಂದ ನಡೆದುಕೊಂಡು ಬಂದ ಈ ಹೋರಾಟ ಒಳ ಮೀಸಲಾತಿ ಜಾರಿಯಾಗುವವರೆಗೂ ಮುಂದುವರೆಯಬೇಕು. ರಾಜ್ಯ ಸರ್ಕಾರ ಜಾತಿವಾರು ಜನಗಣತಿ ವರದಿಯನ್ನು ಅಂಗೀಕರಿಸಿ ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಒಳ ಮೀಸಲಾತಿಗೆ ಅದು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.