ಬೆಂಗಳೂರು: ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೂಸು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನ್ಯಾ. ನಾಗಮೋಹನದ ಸಮಿತಿ ಮಾಡಿದ್ದಕ್ಕೆ ಯಶಸ್ಸು ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಬಯಕೆ ನ್ಯಾಯ ಒದಗಿಸಬೇಕೆನ್ನುವುದಾಗಿದೆ. ಪರಿಶಿಷ್ಟ ಸಮುದಾಯದ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಇಲ್ಲದಿದ್ದರೆ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಿಸಬೇಕಿತ್ತು ಎಂದು ಹೇಳಿದ್ದಾರೆ.
ಬರೀ ಪೇಪರ್‌ನಲ್ಲಿ ಚಾಕೋಲೇಟ್ ಇಟ್ಟು ಕೊಡಲು ಹೋಗಬೇಡಿ. ಬಿಜೆಪಿ ತೀರ್ಮಾನ ಕೇವಲ ಕಣ್ಣೊರೆಸುವುದಷ್ಟೇ ಹೊರತು ಬೇರೇನೂ ಅಲ್ಲ. ಮುಖ್ಯಮಂತ್ರಿಗಳು ದೆಹಲಿಯಲ್ಲಿ ಕುಳಿತು ಶೆಡ್ಯೂಲ್ 9 ರಲ್ಲಿ ಸೇರಿಸಬೇಕು ಎಂದರು.
ಭಾರತ್ ಜೋಡೋ ಯಾತ್ರೆಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದ ಅವರು, ಬಸ್ ಯಾತ್ರೆ ಬಗ್ಗೆ ನಾನೊಬ್ಬನೇ ನಿರ್ಧಾರ ಮಾಡಲು ಆಗುವುದಿಲ್ಲ. ಎಲ್ಲಾ ನಾಯಕರ ಜೊತೆಗೆ ಚರ್ಚಿಸಿ ಯಾತ್ರೆಯ ಬಗ್ಗೆ ನಿರ್ಧರಿಸಲಾಗುವುದು. ಸಾಮೂಹಿಕ ನಾಯಕತ್ವದಲ್ಲಿ ಮತ್ತೊಂದು ಯಾತ್ರೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.