ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆಯೇ ಎನ್ನುವ ಚರ್ಚೆ ನಡೆದಿದೆ.
ಈಗಾಗಲೇ ಬಿಜೆಪಿಯ ಇಬ್ಬರು ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಇದೀಗ ಜೆಡಿಎಸ್ ಮಾಜಿ ಶಾಸಕರಿಗೂ ನೋಟಿಸ್ ಕೊಡಲು ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರ ವಿರುದ್ಧ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಸೂಚನೆಯಂತೆ ನಾಗಮಂಗಲ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ಅವರಿಗೆ ನೋಟಿಸ್ ಕೊಡಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ.
ನಾಗಮಂಗಲ ಪಟ್ಟಣದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ಗಲಭೆಯಲ್ಲಿ ಅವರ ಕೈವಾಡವೂ ಇರಬಹುದು ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ನೋಟಿಸ್ ಕೊಟ್ಟು ವಿವರಣೆ ಕೇಳಲು ಸಚಿವ ಚಲುವರಾಯಸ್ವಾಮಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಚಲುವರಾಯಸ್ವಾಮಿಗೆ ಮಾಜಿ ಶಾಸಕ ಸುರೇಶ್ ಗೌಡ ತಿರುಗೇಟು ನೀಡಿದ್ದು, ನಾಗಮಂಗಲದಲ್ಲಿ ಬಾಂಗ್ಲಾ ವಲಸಿಗರು ನೆಲೆಸಿರುವುದನ್ನು ಕಂಡಿದ್ದೇನೆ. ನನಗೆ ನೋಟಿಸ್ ಕೊಡುವುದಕ್ಕೆ ಚಲುವರಾಯಸ್ವಾಮಿ ಯಾರು? ಪೊಲೀಸರು ನೋಟಿಸ್ ಕೊಟ್ಟರೆ ವಿವರಣೆ ಕೊಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.