ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೇ 20ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಸವಾಲಿನ ನಡುವೆಯೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಸರ್ಕಾರ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಗ್ಯಾರಂಟಿಗಳ ಪ್ರಭಾವ ತಿಳಿಯಲು ಕಾಯತೊಡಗಿದೆ.
2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್, ಕೃಷಿ ಭಾಗ್ಯ ಮೊದಲಾದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ಎರಡನೇ ಅವಧಿಯಲ್ಲಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಎಪಿಎಂಸಿ ಕಾಯ್ದೆ ರದ್ದು, ಕನ್ನಡ ನಾಮಫಲಕ ಕಡ್ಡಾಯ, ಫೇಕ್ ನ್ಯೂಸ್ ತಡೆಗೆ ಕ್ರಮ, ರಾಜ್ಯ ಶಿಕ್ಷಣ ನೀತಿ ಜಾರಿ, ಬ್ರಾಂಡ್ ಬೆಂಗಳೂರು, ಮೆಟ್ರೋ ಮೂರನೇ ಹಂತ, 7ನೇ ವೇತನ ಆಯೋಗ ವರದಿ ಸ್ವೀಕಾರ ಮೊದಲಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವರ ತಂಡ ಸಂಭ್ರಮಾಚರಣೆಗೆ ಸಿದ್ಧತೆ ಕೈಗೊಂಡಿದ್ದರೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುಂದೂಡಲಾಗಿದೆ. ನೀತಿ ಸಂಹಿತೆ ಮುಗಿದ ನಂತರ ಸಂಭ್ರಮಾಚರಣೆ ನಡೆಸಲಾಗುವುದು ಎಂದು ಹೇಳಲಾಗಿದೆ.