ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗದ ಕಾಮಗಾರಿಗಳ ಮರುಪರಿಶೀಲನೆ ಸಲುವಾಗಿ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ.
ಮಠ ಮಾನ್ಯಗಳ ಕಾಮಗಾರಿಗಳಿಗೂ ತಡೆ ಬಿದ್ದಿದ್ದು, ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಕೊಪ್ಪಳ ಗವಿಸಿದ್ದೇಶ್ವರ ಮಠ, ಶ್ರೀಶೈಲ ಮಠ, ಸಿದ್ದರಬೆಟ್ಟ, ರಂಭಾಪುರಿ ಮಠದ ಕಾಮಗಾರಿಗೆ ನೀಡಿದ್ದ ಹಣಕ್ಕೆ ತಡೆ ನೀಡಲಾಗಿದೆ.
ಸರ್ಕಾರ ಯಾವುದೇ ಕಾಮಗಾರಿಗಳಿಗೆ ತಡೆ ನೀಡಿದರೂ ಮಠಮಾನ್ಯಗಳ ಅನುದಾನಕ್ಕೆ ತಡೆ ನೀಡಬಾರದು. ಸಿದ್ಧಗಂಗಾ ಮಠದ ವಿದ್ಯಾರ್ಥಿ ನಿಲಯ ಟೆಂಡರ್ ಪ್ರಕ್ರಿಯೆಗೆ ನೀಡಿದ್ದ ತಡೆ ಹಿಂಪಡೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದು, ಅದೇ ರೀತಿ ಉಳಿದ ಮಠಗಳ ಕಾಮಗಾರಿಗಳ ತಡೆ ತೆರವುಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗದ ಕಾಮಗಾರಿಗಳನ್ನು ಮರುಪರಿಶೀಲನೆ ನಡೆಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ.
ತಿಪಟೂರಿನ ರುದ್ರಮೂರ್ತಿ ಮಠದ 4.5 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿ, ಕೊಪ್ಪಳದ ಗವಿಸಿದ್ದೇಶ್ವರ ಮಠದ 5 ಕೋಟಿ ರೂ. ವೆಚ್ಚದ ಕಾಮಗಾರಿ, ತೆಲಂಗಾಣದ ಶ್ರೀಶೈಲ ಮಠದ 5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ, ಕೊರಟಗೆರೆ ತಾಲೂಕು ಸಿದ್ದರಬೆಟ್ಟದ 2.5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ, ಬಾಳೆಹೊನ್ನೂರು ರಂಭಾಪುರಿ ಮಠದ 10 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಹುಣಸೇಕಲ್ ಮಠದ 1 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಸೇರಿದಂತೆ ವಿವಿಧ ಮಠಗಳ ಕಾಮಗಾರಿ ಅನುದಾನಕ್ಕೆ ತಡೆ ನೀಡಲಾಗಿದೆ.
ಕಾಮಗಾರಿಗಳ ಪುನರ್ ಪರಿಶೀಲನೆ ಕಾರ್ಯ ಮುಗಿದ ಕೂಡಲೇ ಮಠಗಳ ಕಾಮಗಾರಿಗಳ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.