ಬೆಂಗಳೂರು: ಜುಲೈ 1ರಿಂದ ದೇಶಾದ್ಯಂತ ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕಾನೂನುಗಳು ಜಾರಿಯಾದ ಮೊದಲ ದಿನವೇ ರಾಜ್ಯದ ಕಾಂಗ್ರೆಸ್ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಜುಲೈ 15 ರಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಕೇಂದ್ರದ ಹೊಸ ಕಾನೂನುಗಳಿಗೆ ತಿದ್ದುಪಡಿ ತರುವುದಾಗಿ ಘೋಷಿಸಲಾಗಿದೆ.
ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆಗಳಲ್ಲಿ ಅನೇಕ ಲೋಪಗಳು ಇವೆ. ಈ ಮೂರು ಹೊಸ ಕಾನೂನುಗಳಿಂದ ದೇಶದಲ್ಲಿ ಪೊಲೀಸ್ ಆಳ್ವಿಕೆ ಆರಂಭವಾಗುತ್ತದೆ. ಇದು ಸ್ವಾತಂತ್ರ್ಯ ಚಳವಳಿಯ ಆಶಯ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯೂ ಅಧಿಕವಾಗುತ್ತದೆ. ಹೀಗಾಗಿ ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದಾರೆ.
ತಿದ್ದುಪಡಿಗೆ ರಾಜ್ಯಕ್ಕೆ ಅಧಿಕಾರವಿದೆ. ಸಂವಿಧಾನದ ಪರಿಚ್ಛೇದ ಏಳರ ಮೂರನೇ ಪಟ್ಟಿಯಲ್ಲಿ ದತ್ತವಾದ ಅಧಿಕಾರ ಬಳಸಿಕೊಂಡು 3 ಕಾನೂನುಗಳಿಗೂ ತಿದ್ದುಪಡಿ ತರಲಾಗುವುದು ಎಂದು ಹೇಳುವ ಮೂಲಕ ಕೇಂದ್ರದ ಕಾನೂನುಗಳಿಗೆ ರಾಜ್ಯ ಸರ್ಕಾರ ಸಡ್ಡು ಹೊಡೆದಿದೆ.