ಬೆಂಗಳೂರು : ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರ ತುಘಲಕ್ ದರ್ಬಾರಿನ ಶತಕದ ಸಂಭ್ರಮದಲ್ಲಿದೆ. ಸಿದ್ದರಾಮಯ್ಯ ಅವರ ಸರ್ಕಾರ ನೂರು ದಿನ ಸಾಧಿಸಿದ್ದೇನು ಎಂದು ಹುಡುಕಿದರೆ ನೂರಕ್ಕೂ ಹೆಚ್ಚು ಹಳವಂಡಗಳೇ ಹೆಚ್ಚು. ಅಧಿಕಾರಿಗಳ ದುರುಪಯೋಗ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ, ಶ್ಯಾಡೋ ಸಿಎಂ, ಕಾಸಿಗಾಗಿ ಪೋಸ್ಟಿಂಗ್, ಮರಳು ಮಾಫಿಯಾ, ರೈತರ ಆತ್ಮಹತ್ಯೆ, ಕಲುಷಿತ ನೀರು, ಕಳಪೆ ಆಹಾರ ವಿತರಣೆ, ಉಡುಪಿಯ ಅಮಾನುಷ ಘಟನೆ ಅಬ್ಬಬ್ಬಾ ಒಂದಾ ಎರಡಾ ಭಂಡ ಕಾಂಗ್ರೆಸ್ಸಿನ 100 ಕರ್ಮ ಕಾಂಡಗಳು ತೆರೆಯುತ್ತವೆ ಎಂದು ಸರಣಿ ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ
ಗ್ಯಾರಂಟಿಗಳ ಪುಂಗಿ ಊದಿ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಎಡವಿದ್ದೂ ಅಲ್ಲದೆ ಇಂದಿಗೂ ಅವುಗಳನ್ನು ಸರಿಯಾಗಿ ಜಾರಿ ಮಾಡಲಾಗಲಿಲ್ಲ. ಗ್ಯಾರಂಟಿಗಳ ಅನುಷ್ಠಾನಕ್ಕೂ ಮೊದಲೇ ರಾಜ್ಯದಲ್ಲಿ ಶುರುವಾಗಿದ್ದು ಕಲೆಕ್ಷನ್ ಏಜೆಂಟ್ ಸುರ್ಜೇವಾಲಾರ ದರ್ಬಾರ್. ಉನ್ನತ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಅಧಿಕಾರ ಚಲಾಯಿಸಿದ್ದರು. ಈ ಮೂಲಕ ರಾಜ್ಯದ ಬೊಕ್ಕಸದಿಂದ ಕಾಂಗ್ರೆಸ್ ಹೈಕಮಾಂಡ್ಗೆ ಸಂದಾಯವಾದದ್ದು ಎಷ್ಟು ಎಂಬುದನ್ನು ಎಲ್ಲವನ್ನೂ ತಿಳಿದ ಡಿಕೆಶಿ ಅವರೇ ತಿಳಿಸಬೇಕಷ್ಟೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.
ಮುಖ್ಯಮಂತ್ರಿ ಅವರು ಚುನಾವಣೆಗೂ ಮುನ್ನ ಕಾಕಾ ಪಾಟೀಲ್ಗೂ ಫ್ರೀ ಮಹಾದೇವಪ್ಪ ನಿಂಗೂ ಫ್ರೀ ಎಂದು ಪುಂಗಿ ಊದಿ ರಾಜ್ಯದ ಜನರ ಕಿವಿ ಮೇಲೆ ಕಂಡೀಷನ್ ಅಪ್ಲೈ ಎನ್ನುವ ಹೂವನ್ನು ಲೀಲಾಜಾಲವಾಗಿ ಇಟ್ಟರು. 10 ಕೆಜಿ ಅಕ್ಕಿ ಬೇಕೋ ಬೇಡ್ವಾ ಎಂದಿದ್ದ ಸಿದ್ದರಾಮಯ್ಯರವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಇವರ ಮೋಸ ಜನರಿಗೆ ತಿಳಿಯುತ್ತಿದೆ ಎಂಬ ಸೂಚನೆ ಸಿಗುತ್ತಿದ್ದಂತೆ 15 ಕೆಜಿ ಅಕ್ಕಿಯ ಬದಲಿಗೆ ಕೇಂದ್ರದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ನೀಡುವ 5 ಕೆಜಿ ಅಕ್ಕಿಯೇ ತಮ್ಮದೆಂದು ಬಿಂಬಿಸಿದರು. ಇನ್ನುಳಿದ 5 ಕೆಜಿ ಅಕ್ಕಿಗೆ ಹಣವನ್ನೇ ತಿನ್ನಿ ಎಂದು ಕೈತೊಳೆದುಕೊಂಡರು. ವಿಪರ್ಯಾಸವೆಂದರೆ ಪ್ರಧಾನಿ ಮೋದಿ ಅವರ ಸರ್ಕಾರದ 5 ಕೆಜಿ ಅಕ್ಕಿಯಲ್ಲಿ ಎರಡು ಕೆಜಿಯನ್ನು #ATMSarkara ವೇ ತಿಂದು ತೇಗಿದೆ. ಫಲಾನುಭವಿಗಳಿಗೆ ಮೂರು ಕೆಜಿ ಅಕ್ಕಿ ನೀಡಿ ಎರಡು ಕೆಜಿ ರಾಗಿ ನೀಡುತ್ತಿದೆ. 5 ಕೆಜಿ ಅಕ್ಕಿಗೆ ಹಣ ಕೊಡುತ್ತೇವೆಂದು ಪಡಿತರ ಚೀಟಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲವೆಂದು ಇನ್ನೂ ಕಾಗೆ ಹಾರಿಸುತ್ತಲೇ ಇದೆ ಕಾಂಗ್ರೆಸ್..!
ಆತುರಕ್ಕೆ ಬಿದ್ದ ಸಿದ್ದರಾಮಯ್ಯ ಅವರು ಹಿಂದೆ ಮುಂದೆ ನೋಡದೆ ಅವಾಸ್ತವಿಕವಾಗಿ ಶಕ್ತಿ ಯೋಜನೆಯನ್ನು ಜಾರಿ ಮಾಡಿದರು. ಆದರೆ ಇದರಿಂದ ತೊಂದರೆ ಆಗಿದ್ದು ಜನರಿಗೇ ಹೊರತು ಕಾಂಗ್ರೆಸ್ ಸರ್ಕಾರಕ್ಕಲ್ಲ. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬಸ್ಸು ಇಲ್ಲದೆ, ಬರುವ ಬಸ್ಸಲ್ಲೂ ಸೀಟು ಸಿಗದೆ ರಸ್ತೆಯಲ್ಲೇ ನಿಂತುಬಿಟ್ಟರು. ಇದರ ನಡುವೆ ಸದ್ದಿಲ್ಲದೆ ನಿಗಮಗಳು ದರ ಏರಿಸಿದವು. ಸರ್ಕಾರ ಭರಿಸಬೇಕಾದ ಅನುದಾನವನ್ನು ಕೊಡದೆ ನಿಗಮಗಳನ್ನು ಬರ್ಬಾದ್ ಮಾಡಿತು. ಸಾರಿಗೆ ನೌಕರರು ಸಂಬಳವಿಲ್ಲದೆ ಮನೆಗೆ ಹೋಗದೆ ಡಿಪೋಗಳಲ್ಲೇ ಉಳಿದರು. ಇನ್ನು ಟ್ಯಾಕ್ಸಿ, ಆಟೋ, ಖಾಸಗಿ ಬಸ್ ಚಾಲಕರು, ನಿರ್ವಾಹಕರು ಬೀದಿಗೆ ಬಂದಿದ್ದಾರೆ. ಶಕ್ತಿ ಯೋಜನೆಯಿಂದ ನಿಶಕ್ತರಾದ ಈ ಕುಟುಂಬಗಳಿಗೆ ಸರ್ಕಾರ ಇನ್ನು ಪರಿಹಾರ ಕಂಡುಕೊಂಡಿಲ್ಲ. ಕಾಂಗ್ರೆಸ್ ಸರ್ಕಾರದ ನೂರು ದಿನದ ಸಂಭ್ರಮಕ್ಕೆ ಖಾಸಗಿ ಸಾರಿಗೆ ನೌಕರರು ಕರ್ನಾಟಕ ಬಂದ್ ಮೂಲಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.