ಲಖ್ನೋ: ಉತ್ತರ ಪ್ರದೇಶದ ಲಖೀಮ್ ಪುರ್ ಖೇರಿಯಲ್ಲಿ ರೈತರ ಮೇಲೆ ದಾಳಿ ನಡೆದಿದ್ದು, ರೈತರ ಭೇಟಿಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ರಾತ್ರಿಯೇ ಲಖ್ನೋಗೆ ತೆರಳಿದ್ದ ಪ್ರಿಯಾಂಕಾ ಗಾಂಧಿ ಅಲ್ಲಿಂದ ಲಖೀಮ್ ಪುರ್ ಖೇರಿಗೆ ಹೊರಟಿದ್ದರು. ಅವರಿಗೆ ರೈತರ ಭೇಟಿಗೆ ಅವಕಾಶ ನೀಡದ ಪೊಲೀಸರು ಸೀತಾಪುರದ ಸಮೀಪ ವಶಕ್ಕೆ ಪಡೆದಿದ್ದಾರೆ. ಇದಕ್ಕೆ ಪ್ರಿಯಾಂಕಾ ಗಾಂಧಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಲಖೀಮ್ ಪುರ್ ಖೇರಿಯಯಲ್ಲಿ ರೈತರ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾಸ್ಥಳಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್ ಭೇಟಿ ನೀಡಿದ್ದಾರೆ. ಮೃತ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿದ ನಂತರವಷ್ಟೇ ಅಂತ್ಯಕ್ರಿಯೆ ನಡೆಯಲಿದೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಛತ್ತಿಸ್ ಘಢ ಮುಖ್ಯಮಂತ್ರಿ ಭೂಪೇಶ್ ಭಘೆಲ್ ಇಂದು ಬೆಳಗ್ಗೆ ಉತ್ತರಪ್ರದೇಶದ ಲಖೀಮ್ ಪುರ್ ಖೇರಿಗೆ ಭೇಟಿ ನೀಡಲಿದ್ದಾರೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲು ವಾಹನ ಪ್ರತಿಭಟನಾನಿರತ ರೈತರ ಮೇಲೆ ಹರಿದ ಪರಿಣಾಮ 8 ಮಂದಿ ರೈತರು ಸಾವನ್ನಪ್ಪಿದ್ದರು.