ಬೆಂಗಳೂರು: ದೆಹಲಿಯಲ್ಲಿ ಇಂದು ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಗುವುದು. ದೆಹಲಿ ಎಐಸಿಸಿ ಕಚೇರಿಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಿಇಸಿ ಸಭೆ ನಡೆಯಲಿದೆ.
224 ಕ್ಷೇತ್ರಗಳ ಪೈಕಿ 135 ಕ್ಷೇತ್ರಗಳಲ್ಲಿ ಯಾವುದೇ ತಕರಾರು ಇಲ್ಲ. 66 ಕ್ಷೇತ್ರಗಳಿಗೆ ತಲಾ ಒಬ್ಬರ ಹೆಸರನ್ನು ಸ್ಕ್ರೀನಿಂಗ್ ಕಮಿಟಿ ಫೈನಲ್ ಮಾಡಿದೆ. ಹಾಲಿ ಶಾಸಕರ ಪೈಕಿ 4 ಕ್ಷೇತ್ರಗಳಿಗೆ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಕೇಂದ್ರ ಚುನಾವಣಾ ಸಮಿತಿ ಸಮ್ಮತಿಸಿದರೆ 135 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು. ಮೊದಲ ಹಂತದಲ್ಲೇ 135 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ.
ಉಳಿದ 89 ಕ್ಷೇತ್ರಗಳಿಗೆ ತಲಾ ಇಬ್ಬರ ಹೆಸರು ಶಿಫಾರಸು ಮಾಡಲಾಗಿದೆ. ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳೊಂದಿಗೆ ಸಂಧಾನ ನಡೆಸಲಾಗುವುದು. ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕಾಂಕ್ಷಿಗಳೊಂದಿಗೆ ಸಂಧಾನ ನಡೆಸಲಿದ್ದಾರೆ. 10ರಿಂದ 12 ಕ್ಷೇತ್ರಗಳಲ್ಲಿ ಈಗಾಗಲೇ ಸಂಧಾನ ನಡೆಸುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ. ಸಮಸ್ಯೆ ಪರಿಹಾರಕ್ಕೆ ರಾಜ್ಯ ನಾಯಕರು ಹೈಕಮಾಂಡ್ ಮೊರೆ ಹೋಗಿದ್ದಾರೆ. ಹೈಕಮಾಂಡ್ ಜೊತೆಗಿನ ಸಭೆಯ ವೇಳೆ ಕೆಲವು ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಾಗುವ ಸಾಧ್ಯತೆ ಇದೆ.