ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂಬ ಪಕ್ಷದ ವಕ್ತಾರರಾದ ಅಲ್ಕಾ ಲಂಬಾ ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ.
ದೆಹಲಿಯ ಕಾಂಗ್ರೆಸ್ ನಾಯಕರು ಇಂದು ಪಕ್ಷದ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸಿ ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನು ಪರಿಶೀಲಿಸಿದ್ದು, ಸಂಘಟನೆಯನ್ನು ಬಲಪಡಿಸುವ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ಮುಖಂಡರು ಒಗ್ಗಟ್ಟಾಗಿ ಮತ್ತು ಜನರೊಂದಿಗೆ ಸಂಪರ್ಕದಲ್ಲಿರಲು ಹೇಳಿದ್ದಾರೆ.
ಸಭೆಯ ನಂತರ, ದೆಹಲಿಯ ಎಲ್ಲಾ 7 ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸಲು ಅವರಿಗೆ ಆದೇಶ ನೀಡಲಾಗಿದೆ ಎಂದು ಅಲ್ಕಾ ಲಂಬಾ ಹೇಳಿದರು.
ಅಲ್ಕಾ ಲಾಂಬಾ ಹೇಳಿಕೆ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಅನಿಲ್ ಭಾರದ್ವಾಜ್, ಈ ವಿಷಯದ ಬಗ್ಗೆ ಮಾತನಾಡಲು ಅಲ್ಕಾ ಲಂಬಾ ಅವರಿಗೆ ಅಧಿಕಾರವಿಲ್ಲ. ಪಕ್ಷದ ಕೇಂದ್ರ ನಾಯಕತ್ವದೊಂದಿಗಿನ ದೆಹಲಿ ನಾಯಕರ ಇಂದಿನ ಸಭೆಯಲ್ಲಿ ಐಎನ್‌ಡಿಐಎ ಮೈತ್ರಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.
ಅಲ್ಕಾ ಲಾಂಬಾ ಅವರ ದೆಹಲಿ ಚುನಾವಣಾ ಟೀಕೆಗೆ ಪ್ರತಿಕ್ರಿಯಿಸಿದ ಎಎಪಿ ನಾಯಕ ವಿನಯ್ ಮಿಶ್ರಾ, ಕಾಂಗ್ರೆಸ್ ಈ ರೀತಿಯ ಹೇಳಿಕೆಗಳನ್ನು ನೀಡಿದರೆ ಐ.ಎನ್.ಡಿ.ಐ.ಎ. ಮೈತ್ರಿಗೆದ ಯಾವುದೇ ಅರ್ಥವಿಲ್ಲ. ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಹೇಳಿದ್ದಾರೆ.
ನಾವು ನಮ್ಮ ಮಹತ್ವಾಕಾಂಕ್ಷೆಗಳನ್ನು ಬದಿಗಿಟ್ಟು ದೇಶ ಮತ್ತು ಸಂವಿಧಾನದ ಬಗ್ಗೆ ಯೋಚಿಸಬೇಕು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಎಎಪಿ ಮತ್ತೊಬ್ಬ ನಾಯಕ ಸೋಮನಾಥ್ ಭಾರ್ತಿ ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ದೆಹಲಿಯಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿಲ್ಲದ ಕಾರಣ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಉದ್ದೇಶದಿಂದ ಆದ ಐ.ಎನ್.ಡಿ.ಐ.ಎ. ಮೈತ್ರಿಕೂಟದ ಭಾಗವಾಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಎಎಪಿ ನಾಯಕ ದಿಲೀಪ್ ಪಾಂಡೆ ಹೇಳಿದ್ದಾರೆ.