ಬೆಂಗಳೂರು: ನಾಯಕತ್ವ ಬದಲಾವಣೆ ಸಾಧ್ಯತೆ ಕುರಿತಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಉಂಟಾಗಿದೆ.
ಡಿನ್ನರ್ ಪಾರ್ಟಿ ಪಾಲಿಟಿಕ್ಸ್ ಮುಂದುವರೆದಿದೆ. ಕಾಂಗ್ರೆಸ್ ಹೈಕಮಾಂಡ್ ಡಿನ್ನರ್ ಪಾರ್ಟಿಗೆ ಬ್ರೇಕ್ ಹಾಕಿದ್ದರೂ ಆಂತರಿಕ ಸಂಘರ್ಷ ಮುಂದುವರೆದಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಡಿನ್ನರ್ ಪಾರ್ಟಿ ನಡೆಸಲು ಮುಂದಾಗಿದ್ದನ್ನು ಹೈಕಮಾಂಡ್ ಗೆ ದೂರು ನೀಡಿ ರದ್ದು ಪಡಿಸುವಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದರು.
ಇದು ಸಚಿವರಾದ ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ ಮತ್ತು ಜಿ. ಪರಮೇಶ್ವರ್ ಅವರನ್ನು ಕೆರಳಿಸಿದೆ. ಪಕ್ಷದೊಳಗೆ ಅಸಮಾಧಾನ ಗುಂಪುಗಾರಿಕೆ ಉಲ್ಬಣವಾದಂತಿದೆ. ಅಧಿಕಾರ ಹಂಚಿಕೆ ಚರ್ಚೆ ಬಳಿಕ ನಾಯಕತ್ವ ಬದಲಾವಣೆಯಾದಲ್ಲಿ ಅವಕಾಶಕ್ಕೆ ಹಕ್ಕು ಮಂಡಿಸಲು ಆಡಳಿತ ಪಕ್ಷದಲ್ಲಿ ತಯಾರಿ ನಡೆದಂತಿದೆ.
ಡಿನ್ನರ್ ಪಾರ್ಟಿ ರದ್ದಾದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಜಿ. ಪರಮೇಶ್ವರ್ ಸಭೆಯಲ್ಲಿ ಸುರ್ಜೇವಾಲಾ ಅವರು ನಾನು ಭಾಗವಹಿಸುತ್ತೇನೆ ಎಂದು ಹೇಳಿದ ಕಾರಣಕ್ಕೆ ಮುಂದೂಡಿದ್ದೇವೆ. ಶೀಘ್ರವೇ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.
ನಮ್ಮ ಊಟ, ನಮ್ಮ ಅಜೆಂಡಾ, ಅವರಿಗೇಕೆ ಆತಂಕ? ಸಭೆಯನ್ನೇ ಮಾಡಬೇಕು ಎಂದೇನಿಲ್ಲ, ದೂರವಾಣಿ ಮೂಲಕವೂ ಮಾತನಾಡಿಕೊಳ್ಳಬಹುದು ಎಂದು ಸಚಿವ ಸತೀಶ್ ಜಾರಕಿಹೊಳೆ ಡಿನ್ನರ್ ಪಾರ್ಟಿ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಡಿನ್ನರ್ ಪಾರ್ಟಿ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಬೇಜಾರು ಯಾಕೆ? ನಾವು ಅವರ ಆಸ್ತಿಯನ್ನು ಬರೆಸಿಕೊಂಡಿದ್ದೇವೆಯೇ ಎಂದು ಸಚಿವ ಕೆ.ಎನ್. ರಾಜಣ್ಣ ಪ್ರಶ್ನಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಳೆದ ಗುರುವಾರ ನಡೆದ ಡಿನ್ನರ್ ಪಾರ್ಟಿ ಮೀಟಿಂಗ್ ಬಳಿಕ ನಡೆಯುತ್ತಿರುವ ಬೆಳವಣಿಗೆ ನಾನಾ ಸ್ವರೂಪ ಪಡೆಯುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.