ನವದೆಹಲಿ: ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಭಾನುವಾರ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಶಕ್ತಿಸಿನ್ಹ್ ಗೋಹಿಲ್, ಎಐಸಿಸಿಯ ಪ್ರಚಾರ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಒಡಿಶಾ ರೈಲು ದುರಂತವು ಸಂಪೂರ್ಣ ನಿರ್ಲಕ್ಷ್ಯ, ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳು, ಅಸಮರ್ಥತೆಯಿಂದ ಉಂಟಾದ ಮಾನವ ನಿರ್ಮಿತ ವಿನಾಶವಾಗಿದೆ ಎಂದು ಆರೋಪಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಘೋಷಿಸಿರುವ ಪ್ರಧಾನಿ ಮೋದಿ, ಮೊದಲು ಆ ಕೆಲಸವನ್ನು ತಮ್ಮ ರೈಲ್ವೆ ಸಚಿವರಿಂದ ಆರಂಭಿಸಬೇಕು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ನಾವು ಒತ್ತಾಯಿಸುತ್ತೇವೆ ಎಂದು ಖೇರಾ ಹೇಳಿದರು.
ಈ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಿ ಮತ್ತು ರೈಲ್ವೆ ಸಚಿವರ ‘ಪಿಆರ್ ಅಭಿಯಾನ’ದಲ್ಲಿ ರೈಲ್ವೆ ಸುರಕ್ಷತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು.
ನವೆಂಬರ್ 1956 ರ ಅರಿಯಲೂರ್ ರೈಲು ದುರಂತದ ಹಿನ್ನೆಲೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದ್ದರು. ನಿತೀಶ್ ಕುಮಾರ್ ಅವರು ಆಗಸ್ಟ್ 1999 ರ ಗೈಸಾಲ್ ರೈಲು ದುರಂತದ ನಂತರ ರಾಜೀನಾಮೆ ನೀಡಿದ್ದರು ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಿಎಜಿ, ಸಂಸದೀಯ ಸ್ಥಾಯಿ ಸಮಿತಿಗಳು ಮತ್ತು ಅನೇಕ ತಜ್ಞರು ರೈಲ್ವೆ ಸುರಕ್ಷತೆ ಹೆಚ್ಚಿಸಲು ಎಚ್ಚರಿಕೆಗಳನ್ನು ನೀಡಿದ್ದರೂ ಮೋದಿ ಸರ್ಕಾರ ಏಕೆ ಖರ್ಚು ಮಾಡಲಿಲ್ಲ?. ಈ ಭೀಕರ ರೈಲು ದುರಂತಕ್ಕೆ ಯಾರು ಹೊಣೆ ಎಂದು ಗೋಹಿಲ್ ಮತ್ತು ಖೇರಾ ಪ್ರಶ್ನಿಸಿದ್ದಾರೆ.
ಕೆಳಮಟ್ಟದ ಅಥವಾ ಮಧ್ಯಮ ಹಂತದ ಅಧಿಕಾರಿಗಳು ಮಾತ್ರ ಹೊಣೆಗಾರಿಕೆಯ ಭಾರವನ್ನು ಹೊರುತ್ತಾರೆಯೇ ಅಥವಾ ವಂದೇ ಭಾರತ್ ರೈಲುಗಳ ಎಲ್ಲಾ ಕ್ರೆಡಿಟ್ ಅನ್ನು ತೆಗೆದುಕೊಳ್ಳುವ ಕಾರ್ಯನಿರ್ವಾಹಕರು ಸುರಕ್ಷತಾ ಮಾನದಂಡಗಳ ಈ ನಿರ್ಲಕ್ಷ್ಯಕ್ಕೆ ಜವಾಬ್ದಾರರಾಗುತ್ತಾರೆಯೇ ಎಂದು ಅವರು ಪ್ರಧಾನಿ ಮೋದಿ ಹೆಸರು ಹೇಳದೇ ಟೀಕಿಸಿದ್ದಾರೆ.